ಉಡುಪಿ: ಕಾರ್ಕಳದ ಕಾಂಗ್ರೆಸ್ ಕಾರ್ಯಕರ್ತನಿಗೆ ಪೊಲೀಸರು ಹಲ್ಲೆ ನಡೆಸಿರುವ ವಿಚಾರ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಕಾಂಗ್ರೆಸ್ ಕಾರ್ಯಕರ್ತ ರಾಧಾಕೃಷ್ಣ ಹಿರ್ಗಾನ ಎಂಬವರಿಗೆ ಕಾರ್ಕಳ ನಗರ ಪೊಲೀಸ್ ಠಾಣಾ ಎಸ್ಐ ಮಧು ಹಲ್ಲೆ ನಡೆಸಿದ್ದಾಗಿ ಕಾಂಗ್ರೆಸ್ ಪಕ್ಷ ಆರೋಪಿಸಿದೆ.
ಪ್ರಕರಣದ ವಿವರ
ವರ್ಷದ ಹಿಂದೆ ಫೇಸ್ಬುಕ್ನಲ್ಲಿ ಹಾಕಿದ್ದ ಪೋಸ್ಟ್ ಒಂದಕ್ಕೆ ಸಂಬಂಧಿಸಿದಂತೆ ರಾಧಾಕೃಷ್ಣ ಅವರನ್ನು ವಿಚಾರಣೆಗೆ ಕಾರ್ಕಳ ಪೊಲೀಸರು ಕರೆಸಿಕೊಂಡಿದ್ದರು. ಯೋಧರ ವಿರುದ್ಧ ರಾಧಾಕೃಷ್ಣ ನಾಯಕ್ ಪೋಸ್ಟ್ ಹಾಕಿದ್ದಾಗಿ ಆರೋಪಿಸಲಾಗಿತ್ತು. ಆದರೆ ತನ್ನ ಹೆಸರಿನಲ್ಲಿ ನಕಲಿ ಅಕೌಂಟ್ ಕ್ರಿಯೆಟ್ ಮಾಡಿ ಈ ಪೋಸ್ಟ್ ಹಾಕಲಾಗಿದೆ ಎಂದು ರಾಧಾಕೃಷ್ಣ ವಾದಿಸುತ್ತಾ ಬಂದಿದ್ದರು. ಇತ್ತೀಚೆಗೆ ಬೆಂಗಳೂರಿನಿಂದ ವಾಪಸ್ಸಾಗಿದ್ದ ರಾಧಾಕೃಷ್ಣ ಕಾರ್ಕಳದಲ್ಲಿ ನೆಲೆಸಿದ್ದರು. ಈ ವೇಳೆ ಕಾರ್ಕಳ ಪೊಲೀಸರು ಅವರನ್ನು ತನಿಖೆಗೆ ಬರುವಂತೆ ಸೂಚನೆ ನೀಡಿದ್ದರು.
ತನಿಖೆಗೆ ಹಾಜರಾದ ವೇಳೆ ಎಸ್ಐ ಮಧು ಅವರು ಹಲ್ಲೆ ನಡೆಸಿದ್ದಾಗಿ ರಾಧಾಕೃಷ್ಣ ದೂರಿದ್ದಾರೆ. ವರ್ಷದಷ್ಟು ಹಳೆಯ ಫೇಸ್‌ಬುಕ್ ಪೋಸ್ಟ್ಗೆ ಮತ್ತೆ ಠಾಣೆಗೆ ಕರೆಸಿಕೊಂಡು, ಹಲ್ಲೆ ನಡೆಸಿದ್ದಾಗಿ ಅವರು ಆರೋಪಿಸಿದ್ದಾರೆ. ಹೃದಯದ ಕಾಯಿಲೆಯಿಂದ ಬಳಲುತ್ತಿರುವ ರಾಧಾಕೃಷ್ಣಗೆ ಹಲ್ಲೆ ನಡೆಸಿರುವುದು ಅಮಾನವೀಯ ಎಂದು ಕಾಂಗ್ರೆಸ್ ನಾಯಕರು ಆಕ್ಷೇಪಿಸಿದ್ದಾರೆ. ಸದ್ಯ ರಾಧಾಕೃಷ್ಣ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿ ಪೊಲೀಸ್ ವರಿಷ್ಠಾಧಿಕಾರಿಗಳು ಶೀಘ್ರ ಕ್ರಮ ಕೈಗೊಂಡು ನ್ಯಾಯ ಒದಗಿಸುವಂತೆ ಆಗ್ರಹಿಸಿದ್ದಾರೆ
ರಾಜಕೀಯ ತಿರುವು ಪಡೆದುಕೊಂಡ ಪ್ರಕರಣ:
ಈ ಪ್ರಕರಣ ಇದೀಗ ರಾಜಕೀಯ ತಿರುವು ಪಡೆದುಕೊಳ್ಳುತ್ತಿದೆ. ರಾಧಾಕೃಷ್ಣ ಅವರು ಕೇಂದ್ರ ಮತ್ತು ರಾಜ್ಯ ಸರ್ಕಾರದ ತಪ್ಪು ನೀತಿ ವಿರುದ್ಧ ಫೇಸ್ಬುಕ್ನಲ್ಲಿ ಬರಹ ಹಾಕುತ್ತಿದ್ದರು. ಕೆಲವು ಕಿಡಿಗೇಡಿಗಳು ಅವರ ನಕಲಿ ಐಡಿ ಮಾಡಿ ಸೈನಿಕರಿಗೆ ನಿಂದಿಸುವ ಪೋಸ್ಟ್ ಹಾಕಿದ್ದರು. ಇದಕ್ಕೆ ರಾಧಾಕೃಷ್ಣ ಬೆಂಗಳೂರಲ್ಲಿ ದೂರನ್ನೂ ಕೊಟ್ಟಿದ್ದಾರೆ. ಆದರೆ ವರ್ಷದ ಹಿಂದಿನ ಈ ಪ್ರಕರಣಕ್ಕೆ ಮತ್ತೆ ಜೀವ ಕೊಟ್ಟಿರುವ ಬಿಜೆಪಿ ಕಾರ್ಕಳದಲ್ಲಿ ದೂರು ದಾಖಲಿಸಿತ್ತು. ಠಾಣೆಗೆ ರಾಧಾಕೃಷ್ಣ ಎರಡು ಮೂರು ಬಾರಿ ಹೋದರೂ ಠಾಣಾಧಿಕಾರಿ ಇರಲಿಲ್ಲ. ನಿನ್ನೆ ಹೋದಾಗ ಏಕಾಏಕಿ ಹಲ್ಲೆ ಮಾಡಿದ್ದಾರೆ. ಇದೊಂದು ಬಿಜೆಪಿಪ್ರೇರಿತ ಹಲ್ಲೆ ಎಂದು ಕಾರ್ಕಳ ಕಾಂಗ್ರೆಸ್ ಹೇಳಿದೆ.
ಕಾರ್ಕಳದ ಕಾಂಗ್ರೆಸ್ ಮುಖಂಡ ಶುಭದಾ ರಾವ್ ಮಾತನಾಡಿ, ಹೃದಯ ರೋಗಿ ಆಗಿರುವ ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಪೊಲೀಸರ ದರ್ಪ ಖಂಡನೀಯ. ಇದು ಬಿಜೆಪಿ ಪ್ರೇರಿತ ಎಂದು ಕೃತ್ಯ. ತಪ್ಪಿತಸ್ಥ ಪೊಲೀಸರ ವಿರುದ್ಧ ತಕ್ಷಣ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಸಿದ್ದರಾಮಯ್ಯ ವಿರುದ್ಧ ಶಾಸಕ ಸುನೀಲ್ ಕುಮಾರ್ ಗರಂ:
ಸೈನಿಕರ ವಿರುದ್ಧ ಕಾರ್ಕಳದ ವ್ಯಕ್ತಿ ಅಪಮಾನಕರ ಹೇಳಿಕೆ ಹಾಕುತ್ತಿದ್ದಾರೆ. ಹಿಂದು ಜಾಗರಣ ವೇದಿಕೆ ಇದನ್ನು ಖಂಡಿಸಿ ದೂರು ನೀಡಿತ್ತು. ದೇಶದ್ರೋಹದ ಬರಹದ ಪರ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ. ಈ ಸಮರ್ಥನೆ ನೋಡಿ ನನಗೆ ಆಶ್ಚರ್ಯವಾಗಿದೆ. ಸಿದ್ದರಾಮಯ್ಯ ಮಾನಸಿಕತೆ ಮತ್ತು ಬದ್ಧತೆಯ ನನಗೆ ಅರ್ಥವಾಗುತ್ತಿಲ್ಲ. ಸಿದ್ದರಾಮಯ್ಯ ದೇಶ ದ್ರೋಹವನ್ನು ಸಮರ್ಥಿಸುವುದು ಇದು ಮೊದಲ ಬಾರಿಯಲ್ಲ. ಹಿಂದೂ ಕಾರ್ಯಕರ್ತರ ಕೊಲೆಯಾದರೆ ಎಸ್ ಡಿ ಪಿ ಐಯನ್ನು ಸಮರ್ಥನೆ ಮಾಡುತ್ತಾರೆ. ಕೆ.ಜಿ ಹಳ್ಳಿ ಘಟನೆಯಲ್ಲೂ ಗಲಭೆಕೋರರ ಪರ ನಿಲ್ಲುತ್ತಾರೆ. ಮಂಗಳೂರು ಸಿಎಎ ವಿರುದ್ಧದ ಗಲಭೆಯನ್ನು ವಿಧಾನಸೌಧದಲ್ಲಿ ಸಮರ್ಥಿಸಿಕೊಂಡರು. ನಿಮ್ಮ ರಾಜಕೀಯ ಚಟಕ್ಕೆ ದೇಶದ್ರೋಹಿಗಳನ್ನು ಬೆಂಬಲಿಸಬೇಡಿ. ರಾಧಾಕೃಷ್ಣ ಪಾಕಿಸ್ತಾನ ಬೆಂಬಲಿಸಿ, ಸೈನಿಕರ ವಿರುದ್ಧ ಪೋಸ್ಟ್ ಹಾಕಿದ್ದಾನೆ. ಆತನ ಮಾನಸಿಕತೆಯನ್ನು ಅರ್ಥಮಾಡಿಕೊಳ್ಳಿ. ನಿಮ್ಮ ನಿಷ್ಠೆ ಯಾರ ಪರ ಎಂಬುದನ್ನು ಹೇಳಿ ಅಂತಾ ಕಾರ್ಕಳ ಶಾಸಕ ಸುನೀಲ್ ಕುಮಾರ್ ತಿರುಗೇಟು ನೀಡಿದ್ದಾರೆ. ಸರಣಿ ಟ್ವೀಟ್ ಮಾಡಿ ಸಿದ್ದರಾಮಯ್ಯ ಗೆ ಸುನೀಲ್ ಕುಮಾರ್ ಟಾಂಗ್ ನೀಡಿದ್ದಾರೆ.
ತನಿಖೆಗೆ ಎಸ್ಪಿ ಆದೇಶ :
ತನಿಖೆಗೆ ಹಾಜರಾದ ವೇಳೆ ಎಸ್ಐ ಮಧು ಅವರು ಹಲ್ಲೆ ನಡೆಸಿದ್ದಾಗಿ ರಾಧಾಕೃಷ್ಣ ದೂರಿದ್ದರು. ಈ ಪ್ರಕರಣದ ಸಮಗ್ರ ತನಿಖೆಗೆ ಎಸ್ಪಿ ವಿಷ್ಣುವರ್ಧನ ಆದೇಶ ನೀಡಿದ್ದಾರೆ. ಕುಂದಾಪುರ ಡಿಎಸ್ಪಿಗೆ ತನಿಖೆ ನಡೆಸಿ ವರದಿ ನೀಡುವಂತೆ ಆದೇಶ ನೀಡಲಾಗಿದೆ.