ಉಡುಪಿ: ಅಯೋಧ್ಯೆಯ ರಾಮಮಂದಿರ ನಿರ್ಮಾಣದ ನಿಧಿ ಸಂಗ್ರಹ ಕಾರ್ಯ ಜನವರಿ 15ರಿಂದ ದೇಶಾದ್ಯಂತ ಆರಂಭವಾಗಿದೆ. ಫೆಬ್ರವರಿ 9ರವರೆಗೆ ಸುಮಾರು 1000 ಕೋಟಿ ರೂಪಾಯಿ ಸಂಗ್ರಹವಾಗಿದೆ ಎಂದು ಅಭಿಯಾನದ ನೇತೃತ್ವ ವಹಿಸಿರುವ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥರು ತಿಳಿಸಿದ್ದಾರೆ.
ರಾಮಮಂದಿರ ನಿರ್ಮಾಣ ಟ್ರಸ್ಟ್ನ ವಿಶ್ವಸ್ಥರಾಗಿರುವ ಸ್ವಾಮೀಜಿ, ಅಭಿಯಾನದ ಪ್ರಯುಕ್ತ ದಕ್ಷಿಣ ಭಾರತದಾದ್ಯಂತ ಸಂಚಾರ ನಡೆಸಿದ್ದಾರೆ. ದಕ್ಷಿಣ ಭಾರತ ಮಾತ್ರವಲ್ಲದೆ ಇಡೀ ದೇಶದಲ್ಲಿಯೇ ಸಿರಿವಂತರು, ನಾಡಿನ ಪ್ರಥಮ ಪ್ರಜೆಗಳಿಂದ ಹಿಡಿದು ಜನಸಾಮಾನ್ಯರು ಉತ್ತಮ ರೀತಿಯಲ್ಲಿ ಸ್ಪಂದಿಸಿದ್ದಾರೆ. ಹಿಂದುಗಳು ಮಾತ್ರವಲ್ಲದೆ ಇತರರಿಂದಲೂ ಉತ್ತಮ ಪ್ರತಿಕ್ರಿಯೆ ಬರುತ್ತಿದೆ ಎಂದು ಸ್ವಾಮೀಜಿ ಹೇಳಿದ್ದಾರೆ.
ಫೆಬ್ರವರಿ 27ರವರೆಗೆ ನಿಧಿ ಸಂಗ್ರಹ ಅಭಿಯಾನ ಮುಂದುವರಿಯಲಿದೆ. ಉದ್ದೇಶಿತ ಒಂದೂವರೆ ಸಾವಿರ ಕೋಟಿ ಗಡಿ ಶೀಘ್ರವೇ ತಲುಪುವ ಸಾಧ್ಯತೆ ಇದೆ. ಕೇವಲ ರಾಮಮಂದಿರ ಮಾತ್ರವಲ್ಲ. ರಾಮರಾಜ್ಯವನ್ನು ಕಟ್ಟುವ ಗುರಿ ನಮ್ಮ ಮುಂದೆ ಇದೆ. ಹೆಚ್ಚುವರಿಯಾಗಿ ಬಂದ ಹಣವನ್ನು ಹೇಗೆ ಬಳಸಿಕೊಳ್ಳಬೇಕೆಂದು ಟ್ರಸ್ಟ್ ನಿರ್ಧರಿಸುತ್ತದೆ ಎಂದು ಸ್ವಾಮೀಜಿ ಹೇಳಿದ್ದಾರೆ.