ಉಡುಪಿ : ಮಧ್ವಾಚಾರ್ಯರ ಕಾಲದಿಂದಲೂ ಕುಕ್ಕೆಯಲ್ಲಿ ಮಠದವರೇ ಪೂಜೆ ಮಾಡುತ್ತಾ ಬಂದಿದ್ದಾರೆ. ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಪೂಜಾಕ್ರಮಗಳು ದೇವಾಲಯದ ಪೂಜೆಗಳಂತಲ್ಲ. ಕುಕ್ಕೆಯ ಆಚರಣೆ ಸಂಪ್ರದಾಯಗಳು ಮಠದಂತೆ ಇವೆ. ಕುಕ್ಕೆಯಲ್ಲಿ ತಲೆಯ ಮೇಲೆ ಹೊತ್ತುಕೊಂಡು ಹೋಗುವ ಉತ್ಸವ ನಡೆಯುವುದಿಲ್ಲ ಎಂದು ಉಡುಪಿ ಪಲಿಮಾರು ಮಠಾಧೀಶ ವಿದ್ಯಾಧೀಶ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಕುಕ್ಕೆಯಲ್ಲಿ ಈ ಹಿಂದಿನಿಂದಲೂ ನಡೆದುಕೊಂಡು ಬಂದ ಪೂಜಾ ಪದ್ಧತಿಯನ್ನು ಮುಂದುವರಿಸಬೇಕು. ಆಚರಣೆಯಲ್ಲಿ ಭಿನ್ನವಾದರೆ ದೇವಸ್ಥಾನ ಅದನ್ನು ಒಪ್ಪಿಕೊಳ್ಳುವುದಿಲ್ಲ. ಪ್ರತಿಷ್ಠಾ ಕಾಲದಲ್ಲಿ ಪೂಜೆ ಯಾವ ರೀತಿ ಆರಂಭವಾಗಿದೆ, ಅದು ಹಾಗೆಯೇ ಮುಂದುವರೆಯಬೇಕು. ಯಾವುದೇ ವ್ಯತ್ಯಾಸಗಳು ಆದರೆ ದೋಷ ಬರುತ್ತದೆ. ನನಗೆ ರುದ್ರನ ಮೇಲೆ ದ್ವೇಷ ಇಲ್ಲ, ನಾನು ರುದ್ರ ಪಾರಾಯಣ ಮಾಡುತ್ತೇನೆ. ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಾನು ರುದ್ರ ಪಾರಾಯಣ ಮಾಡಿಸುತ್ತಿದ್ದೇನೆ. ಯಾವುದೇ ದೇವಸ್ಥಾನದಲ್ಲಿ ಆಗಲಿ ಅನೂಚಾನವಾಗಿ ಬಂದ ಆಚರಣೆ ಅದು ಹಾಗೆಯೇ ಮುಂದುವರೆಯಬೇಕು ಎಂದರು.
ಓದಿ : ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭುಗಿಲೆದ್ದ ಶಿವರಾತ್ರಿ ಪೂಜೆಯ ಹೊಸ ವಿವಾದ
ಮಂತ್ರ ಕ್ರಮ ಎಲ್ಲವೂ ತಂತ್ರದ ರೀತಿಯಲ್ಲಿ ಬಂದರೆ ಚಂದ. ಕುಕ್ಕೆಯಲ್ಲಿ ಸ್ಕಂದನ ದೇವಸ್ಥಾನ ಇರುವುದು. ಸ್ಕಂದನ ಪೂಜೆ ಹೇಗೆ ಆಗಬೇಕೋ ಅದು ಹಾಗೆ ನಡೆದುಕೊಂಡು ಬರುತ್ತಿದೆ. ಸುಬ್ರಮಣ್ಯ ಸ್ಕಂದ ಕೇಂದ್ರಿತವಾದಂತಹ ಕ್ಷೇತ್ರ. ಬದಲಾವಣೆಗಳು ಆಗಬೇಕಾದರೆ ವಿಮರ್ಶೆ ಮಾಡಬೇಕು ಎಂಬುದು ನನ್ನ ಅನಿಸಿಕೆ. ನನ್ನ ಅಭಿಪ್ರಾಯ ಕೇಳಿದರೆ ಯಾವುದೇ ಪೂಜಾ ಪದ್ದತಿ ಬದಲಾವಣೆಗಳು ಬೇಡ ಎನ್ನುತ್ತೇನೆ. ಆದರೆ ಬದಲಾವಣೆ ಬೇಕು ಅನ್ನುವವರು ವಿಮರ್ಶೆ ಮಾಡಿ ಎಂದು ಪಲಿಮಾರು ಸ್ವಾಮೀಜಿ ಸಲಹೆ ಕೊಟ್ಟಿರು.