ಉಡುಪಿ: ರಸ್ತೆ ವಿಚಾರಕ್ಕೆ ಸಂಬಂಧಿಸಿದಂತೆ ಗ್ರಾಮ ಪಂಚಾಯತ್ ಸದಸ್ಯ ಹಾಗೂ ಮಹಿಳೆಯೊಬ್ಬರ ನಡುವೆ ಜಟಾಪಟಿ ಉಂಟಾಗಿ ಮಹಿಳೆಗೆ ಗಾಯವಾದ ಘಟನೆ ಉಡುಪಿ ಜಿಲ್ಲೆಯ ಆತ್ರಾಡಿಯಲ್ಲಿ ನಡೆದಿದೆ. ಇಲ್ಲಿನ ನಿವಾಸಿ ಆರತಿ ಎಂಬುವವರಿಗೆ ಸೇರಿದೆ ಎನ್ನಲಾದ ಪಟ್ಟಾ ಜಾಗದಲ್ಲಿ ವಿರೋಧದ ನಡುವೆಯೂ ಆತ್ರಾಡಿ ಗ್ರಾಮ ಪಂಚಾಯತ್ ಕಾಂಕ್ರಿಟ್ ರಸ್ತೆ ನಿರ್ಮಿಸಲು ತಯಾರಿ ನಡೆಸಿತ್ತು.
ಚಪ್ಪಲಿಯಿಂದ ಹೊಡೆದ ಮಹಿಳೆ!: ತಮ್ಮ ಮನೆಯವರ ಆಕ್ಷೇಪವಿದ್ದರೂ ರಸ್ತೆ ಕೆಲಸ ಪ್ರಾರಂಭಿಸಿದ್ದನ್ನು ಆರತಿ ಪ್ರಶ್ನಿಸಿದ್ದಾರೆ. ಈ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದು ಕೋಪಗೊಂಡ ಆರತಿ ತನ್ನ ಚಪ್ಪಲಿಯಿಂದ ಅಲ್ಲಿದ್ದವರಿಗೆ ಹೊಡೆದಿದ್ದಾರೆ. ಕೂಡಲೇ ಸ್ಥಳದಲ್ಲಿದ್ದ ಪಂಚಾಯತ್ ಸದಸ್ಯ ರತ್ನಾಕರ್ ಶೆಟ್ಟಿ ಈಶ್ವರನಗರ ಮತ್ತು ಮನೆ ಪಕ್ಕದ ಚಂದ್ರಹಾಸ ಶೆಟ್ಟಿ, ಸಂತೋಷ ಪೂಜಾರಿ ಎಂಬುವವರು ಆರತಿಯವರನ್ನು ತಳ್ಳಿದ್ದಾರೆ. ಮಹಿಳೆಯ ತಲೆಗೆ ಗಾಯವಾಗಿದೆ. ಇದೀಗ ಆಕೆಯನ್ನು ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇದನ್ನೂ ಓದಿ: ಕ್ರೀಡಾಂಗಣದಲ್ಲಿ ಸೇನಾ ಆಕಾಂಕ್ಷಿಗಳ ನಡುವೆ ಹೊಡೆದಾಟ, ಗುಂಡಿನ ದಾಳಿ ಶಂಕೆ: ವಿಡಿಯೋ ವೈರಲ್