ಉಡುಪಿ: ಕೊರೊನಾ ಶಂಕಿತರು ಬಂದರೆ ಆಸ್ಪತ್ರೆಗೆ ದಾಖಲಿಸಿಕೊಳ್ಳಿ, ಎಲ್ಲಾ ರೀತಿಯ ಸೌಲಭ್ಯ ಒದಗಿಸಿ ಎಂದು ಜಿಲ್ಲಾಧಿಕಾರಿ ಜಗದೀಶ್ ಜಿಲ್ಲೆಯ ಖಾಸಗಿ ಆಸ್ಪತ್ರೆಗಳಿಗೆ ಸೂಚನೆ ನೀಡಿದ್ದಾರೆ.
ಖಾಸಗಿ ಆಸ್ಪತ್ರೆಯಲ್ಲೂ ಎರಡು ಬೆಡ್ನ ಐಸೊಲೇಷನ್ ವಾರ್ಡ್ ವ್ಯವಸ್ಥೆ ಮಾಡಲಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ 10, ತಾಲೂಕು ಆಸ್ಪತ್ರೆಯಲ್ಲಿ 5, ಕೆಎಂಸಿಯಲ್ಲಿ 10 ಬೆಡ್ಗಳ ವಾರ್ಡ್ ಮಾಡಲಾಗಿದೆ. ಅಗತ್ಯ ಬಿದ್ದರೆ ನೂತನ ಗ್ರಂಥಾಲಯ ಕಟ್ಟಡದಲ್ಲಿ 100 ಬೆಡ್ಗಳ ವ್ಯವಸ್ಥೆ ಮಾಡಲಾಗುವುದು. ಪ್ರಥಮ ಹಂತದಲ್ಲಿ ಮೂವತ್ತು ಬೆಡ್ಗಳನ್ನು ಒಳಗೊಂಡ ಐಸೊಲೇಷನ್ ವಾರ್ಡ್ ಮಾಡಲಾಗುವುದು ಎಂದು ಜಗದೀಶ್ ಹೇಳಿದ್ದಾರೆ.
ಉಡುಪಿಗೆ ಈವರೆಗೆ ವಿದೇಶದಿಂದ 230 ಮಂದಿ ಬಂದಿದ್ದು ಎಲ್ಲರನ್ನೂ ಸಂಪರ್ಕಿಸಿ ಮನೆಯಲ್ಲೇ ಉಳಿಯುವಂತೆ ಸೂಚಿಸಲಾಗಿದೆ. ಹೋಂ ಕ್ವಾರಂಟೈನ್ ಉಲ್ಲಂಘನೆ ಮಾಡಿದರೆ ಕಠಿಣ ಶಿಕ್ಷೆ ನೀಡಲಾಗುವುದು ಎಂದು ಹೇಳಿದ್ದಾರೆ.
ಕಾಸರಗೋಡು ವ್ಯಕ್ತಿಗೆ ಪಾಸಿಟಿವ್ ಬಂದ ಹಿನ್ನೆಲೆ ಆ ವಿಮಾನದಲ್ಲಿ ಉಡುಪಿಯ 13 ಮಂದಿ ಪ್ರಯಾಣಿಸಿದ್ದರು. ಎಲ್ಲರಿಗೂ ಮನೆಯಲ್ಲೇ ಇರಲು ಸೂಚಿಸಿದ್ದು, ಅವರಿಗೆಲ್ಲ ಆರೋಗ್ಯ ಸ್ಥಿರವಾಗಿದೆ ಎಂದರು.
ತುರ್ತು ಕೆಲಸವಿಲ್ಲದೆ ಸರ್ಕಾರಿ ಕಚೇರಿಗೆ ಬರಬೇಡಿ. ಆಸ್ಪತ್ರೆಗಳಿಗೆ ರೆಗ್ಯುಲರ್ ಚೆಕ್ ಅಪ್ಗೆ ಬರದಿದ್ರೆ ಒಳ್ಳೆಯದು. ದಯವಿಟ್ಟು ಪ್ರವಾಸ, ಮದುವೆ, ಜಾತ್ರೆಗಳಿಗೆ ನಮ್ಮ ಜಿಲ್ಲೆಗೆ ಬರಬೇಡಿ ಎಂದು ಮನವಿ ಮಾಡಿದ್ದಾರೆ.
ಯಾವುದೇ ಉತ್ಸವ, ಅನ್ನದಾನ, ಪ್ರವಚನ ಸಭೆ ನಡೆಸುವಂತಿಲ್ಲ. ಕೃಷ್ಣ ಮಠ ಸೇರಿದಂತೆ ಧಾರ್ಮಿಕ ಕೇಂದ್ರಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಸೂಚನೆ ಮೀರಿಯೂ ಯಕ್ಷಗಾನ ಸೇರಿದಂತೆ ಇನ್ನಿತರ ಸಾರ್ವಜನಿಕ ಕಾರ್ಯಕ್ರಮಗಳನ್ನು ನಡೆಸಿದರೆ ಪ್ರಕರಣ ದಾಖಲಿಸುತ್ತೇವೆ ಎಂದು ಜಿಲ್ಲಾಧಿಕಾರಿ ಖಡಕ್ ಸೂಚನೆ ನೀಡಿದ್ದಾರೆ.