ಉಡುಪಿ : ಮಾನವೀಯತೆ ಇನ್ನೂ ನಮ್ಮ ನಡುವೆ ಜೀವಂತವಾಗಿದೆ ಅನ್ನೋದಕ್ಕೆ ಇವತ್ತು ಉಡುಪಿಯಲ್ಲೊಂದು ಅಪರೂಪದ ಘಟನೆ ನಡೆಯಿತು.
ಮಮತೆಯ ತೊಟ್ಟಿಲಲ್ಲಿ ಹಾಯಾಗಿ ಇರಬೇಕಿದ್ದ ಮಗು ಮೂರು ತಿಂಗಳ ಹಿಂದೆ ಕಸದ ತೊಟ್ಟಿಯಲ್ಲಿ ಆನಾಥವಾಗಿ ಅಳುತ್ತಾ ಬಿದ್ದಿತ್ತು. ಹೆತ್ತಬ್ಬೆಗೆ ಈ ಮಗು ಬೇಡವಾಯ್ತೋ ಅಥವಾ ಸಮಾಜಕ್ಕೆ ಅಂಜಿ ಬಿಟ್ಟಿದಳ್ಳೋ ಗೊತ್ತಿಲ್ಲ.
ಉಡುಪಿ ಹೋಟೆಲ್ ಮುಂಭಾಗದ ಕಸದ ಡಬ್ಬದಲ್ಲಿ ಈ ಪುಟ್ಟ ಮಗು ಅಳುತ್ತಿತ್ತು. ಬೆಳಗ್ಗೆ ಕಸ ಗುಡಿಸುವ ಯುವಕನಿಗೆ ಅಳುವ ಕಂದನ ಕೂಗು ಕೇಳಿ ಹೋಗಿ ನೋಡಿದಾಗ, ನವಜಾತ ಶಿಶು ಬುಟ್ಟಿಯೊಳಗಡೆ ಅಮ್ಮನ ಎದೆ ಹಾಲಿಗಾಗಿ ರೋದಿಸುತ್ತಿತ್ತು. ಆದ್ರೆ, ತಾಯಿ ಮಾತ್ರ ಮಗುವನ್ನು ಅನಾಥೆ ಮಾಡಿ ಹೊರಟು ಹೋಗಿದ್ದಳು.
ಕಸ ಆಯುವ ಆತನಿಗೆ ಮುಂದೇನು ಮಾಡುವುದು ಅಂತಾ ಗೊತ್ತಾಗದೇ ಕೂಡಲೇ ಸಾಮಾಜಿಕ ಕಾರ್ಯಕರ್ತ ನಿತ್ಯಾನಂದ ವಳಕಾಡ್ ಅವರಿಗೆ ತಿಳಿಸುತ್ತಾನೆ, ಕೂಡಲೇ ಸ್ಥಳಕ್ಕೆ ಬಂದ ಅವರು ಇದೇ ಮಗುವನ್ನು ಕಸದ ತೊಟ್ಟಿಯಿಂದ ತೆಗೆದು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸ್ತಾರೆ. ನಂತರ ಉಡುಪಿ ಸಮೀಪದಲ್ಲೇ ಇರುವ ಕೃಷ್ಣಾನುಗ್ರಹ ಅನಾಥ ಮಕ್ಕಳ ದತ್ತು ಸ್ವೀಕಾರ ಸಂಸ್ಥೆಗೆ ನೀಡಿದ್ರು.
ಇಂದು ಅದೇ ಪುಟ್ಟ ಕಂದನಿಗೆ ತೊಟ್ಟಿಲು ಶಾಸ್ತ್ರ, ನಾಮಕರಣದ ಸಂಭ್ರಮ. ಮಗು ಬೆಳೆದು ಪ್ರಜ್ವಲಿಸಲಿ ಅಂತಾ ಪ್ರಜ್ವಲಾ ಅಂತಾ ಹೆಸರಿಡಲಾಯಿತು. ಕಾರ್ಯಕ್ರಮಕ್ಕೆ ಊರಿನವರು ಹಾಗೂ ವಿವಿಧ ಸಂಘ ಸಂಸ್ಥೆಗಳು ಸಹಕಾರ ನೀಡಿದ್ರು. ಕಾರ್ಯಕ್ರಮ ಸರಳ ಆಗಿದ್ರೂ ಸಂಭ್ರಮ ಎಲ್ಲರ ಮೊಗದಲ್ಲಿ ಎದ್ದು ಕಂಡಿತು. ನೂರಾರು ಜನ ಸೇರಿ ಮಗುವಿಗೆ ಶುಭ ಹಾರೈಸಿ, ಸಿಹಿ ಉಂಡು ಸಂತೋಷಪಟ್ಟರು.
ಪ್ರಜ್ವಲಾ ತನ್ನಂತಿರುವ ದೇವರ ಮಕ್ಕಳ ಜೊತೆಗೆ ಚೆನ್ನಾಗಿ ಬೆಳೆಯಲಿ, ವಿದ್ಯಾವಂತಳಾಗಿ ಪ್ರಜ್ಚಲಿಸಲಿ ಅನ್ನೋದು ಎಲ್ಲರ ಹಾರೈಕೆ..