ಉಡುಪಿ: ಬೀಚ್ ಆವರಣದಲ್ಲಿ ನಮಾಜ್ ಮಾಡುವ ವಿಚಾರವಾಗಿ ಮಾತಿನ ಚಕಮಕಿ ನಡೆದಿದೆ. ಉಡುಪಿ ಜಿಲ್ಲೆಯ ಪಡುಬಿದ್ರೆಯಲ್ಲಿರುವ ಬೀಚ್‌ನಲ್ಲಿ ಭಾನುವಾರ ಸಂಜೆ ಈ ಘಟನೆ ಸಂಭವಿಸಿದೆ.
ಪಡುಬಿದ್ರೆಯ ಈ ಬೀಚ್ಗೆ ಬ್ಲೂ ಫ್ಲಾಗ್ ಅಂತಾರಾಷ್ಟ್ರೀಯ ಮಾನ್ಯತೆ ದೊರಕಿದೆ. ಪ್ರವಾಸೋದ್ಯಮದ ದೃಷ್ಟಿಯಿಂದ ಈ ಮಾನ್ಯತೆಯನ್ನು ನೀಡಲಾಗಿದ್ದು, ಬೀಚ್ ಆವರಣದಲ್ಲಿ ಯಾವುದೇ ಧಾರ್ಮಿಕ ಚಟುವಟಿಕೆಗಳನ್ನು ನಡೆಸುವಂತಿಲ್ಲ ಎಂಬ ಫಲಕವನ್ನೂ ಕೂಡ ಹಾಕಲಾಗಿದೆ. ಆದರೆ ಭಾನುವಾರ ಸಂಜೆ ಬೀಚ್ ನೋಡಲು ಮಂಗಳೂರಿನಿಂದ ಬಂದಿದ್ದ ಒಂದು ತಂಡ ಕಡಲತೀರದಲ್ಲಿ ನಮಾಜ್ ಮಾಡಲು ಮುಂದಾಯಿತು. ಆದರೆ ಬ್ಲೂ ಫ್ಲಾಗ್ ಸಿಬ್ಬಂದಿ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.
ಯಾವುದೇ ಧರ್ಮದ ಧಾರ್ಮಿಕ ಚಟುವಟಿಕೆಗಳನ್ನು ನಡೆಸಲು ಬೀಚ್ ಆವರಣದಲ್ಲಿ ಅವಕಾಶವಿಲ್ಲ ಎಂದು ಮನವರಿಕೆ ಮಾಡಿಕೊಟ್ಟರು. ಇದರ ಹೊರತಾಗಿಯೂ ಓರ್ವ ಯುವಕ ನಮಾಜ್ ಕೈಗೊಂಡಿದ್ದ. ಇದರಿಂದ ಸಿಬ್ಬಂದಿ ಮತ್ತು ಪ್ರವಾಸಿಗರ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು.
ಬ್ಲೂ ಫ್ಲಾಗ್ ಬೀಚ್ ಆದಕಾರಣ ಕಟ್ಟುನಿಟ್ಟಿನ ನಿಯಮಾವಳಿಗಳನ್ನು ಪಾಲಿಸಲೇಬೇಕು ಎಂದು ಸಿಬ್ಬಂದಿ ಸ್ಪಷ್ಟಪಡಿಸಿದ ನಂತರ ಗಲಾಟೆಗೆ ಮುಂದಾಗಿದ್ದ ಪ್ರವಾಸಿಗರು ಕ್ಷಮೆಯಾಚಿಸಿ ವಾಪಸ್ ಆಗಿದ್ದಾರೆ ಎಂದು ತಿಳಿದುಬಂದಿದೆ.