ಉಡುಪಿ: ಊಟ ಕೇಳಿದ 82 ವರ್ಷದ ತಾಯಿಯನ್ನು ಮಗ ಹಲ್ಲೆ ನಡೆಸಿ ಮನೆಯಿಂದ ಹೊರ ಹಾಕಿ ಕ್ರೂರತ್ವ ಮೆರೆದ ಘಟನೆ ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ನಡೆದಿದೆ.
ತಾಲೂಕಿನ ಕಲ್ಯಾ ಗ್ರಾಮದ ಕೈಕಂಬ ಎಂಬಲ್ಲಿ 82 ವರ್ಷದ ಯಶೋಧ ಹಾಗೂ ಮಗ ದಾಮೋದರನೊಂದಿಗೆ ವಾಸವಾಗಿದ್ದರು. ತಾಯಿ ಹಸಿವಿನಿಂದ ಮಗನಲ್ಲಿ ಊಟ ಕೇಳಿದ್ದಾರೆ. ಈ ವೇಳೆ ಕೋಪಗೊಂಡ ಮಗ ದಾಮೋದರ ಊಟ ನೀಡದೇ, ಎದ್ದು ನಿಲ್ಲಲು ಆಗದ ವೃದ್ಧೆ ತಾಯಿಯನ್ನು ಹೊಡೆದು ಮನೆಯಿಂದ ಹೊರಗೆ ಹಾಕಿದ್ದಾನೆ ಎನ್ನಲಾಗಿದೆ.
ದಾಮೋದರ ವೃದ್ಧೆ ತಾಯಿಗೆ ತಲೆಯಲ್ಲಿ ರಕ್ತ ಸೋರುವಂತೆ ಹಲ್ಲೆ ಮಾಡಿದ್ದಾನೆ. ಮನೆ ಮುಂದಿನ ಜಗುಲಿಯಲ್ಲಿ ಬಿದ್ದಿದ್ದ ವೃದ್ಧೆಯನ್ನು ನೋಡಿದ ಸಮಾಜ ಸೇವಕಿ ರಮಿತ ಶೈಲೇಂದ್ರ, ವೃದ್ಧೆಯ ಮಗನಿಗೆ ಬೈದು ಆತನ ನೆರವಿನಿಂದಲೇ ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದಿದ್ದಾರೆ.
ಯಶೋಧಾ ಅವರ ಗಂಡ 5 ವರ್ಷದ ಹಿಂದೆ ಮೃತಪಟ್ಟಿದ್ದರು. ಬಳಿಕ ವೃದ್ಧೆ ಮಗನ ಜೊತೆಗೆ ವಾಸವಾಗಿದ್ದರು. ಮಗ ಹಾಗೂ ಸೊಸೆ ನನ್ನನ್ನು ಸರಿಯಾಗಿ ನೋಡಿಕೊಳ್ಳತ್ತಿರಲಿಲ್ಲ. ಮರದ ತುಂಡಿನಿಂದ ಹೊಡೆದು ಗಾಯಗೊಳಿಸಿದ್ದಾರೆ ಅಂತ ತಾಯಿ ಯಶೋಧಾ ಹೇಳಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಮಗ ದಾಮೋದರನ ವಿರುದ್ಧ ಹೆತ್ತ ತಾಯಿ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.