ಉಡುಪಿ : ಜಿಲ್ಲೆಯಲ್ಲಿ ಸಚಿವ ಸ್ಥಾನ ಆಕಾಂಕ್ಷಿಗಳ ಪ್ರಯತ್ನ ಮುಂದುವರೆದಿದೆ. ಕಾಪು ಕ್ಷೇತ್ರದ ಶಾಸಕ ಲಾಲಾಜಿ ಆರ್.ಮೆಂಡನ್ ಪರ ಮೊಗವೀರ ಸಮುದಾಯ ಬ್ಯಾಟಿಂಗ್ ನಡೆಸಲು ಮುಂದಾಗಿದಿದೆ.
ಕರಾವಳಿ ಜಿಲ್ಲೆಗಳನ್ನು ಬಿಜೆಪಿಯ ಭದ್ರಕೋಟೆ ಮಾಡುವಲ್ಲಿ ನಮ್ಮ ಸಮುದಾಯದ ಕೊಡುಗೆ ದೊಡ್ಡದಿದೆ. ಸಮುದಾಯದ ಮತದಾರರನ್ನು ನಿರ್ಲಕ್ಷಿಸಬೇಡಿ ಎಂದು ಮೊಗವೀರ ಸಂಘಟನೆಗಳು ರಾಜ್ಯ ಸರ್ಕಾರಕ್ಕೆ ಎಚ್ಚರಿಸಿವೆ.
ವಿಧಾನಸಭೆಯಲ್ಲಿ ಗಂಗಾಮತ-ಮೊಗವೀರ ಸಮುದಾಯಕ್ಕೆ ಸೇರಿದ ಏಕೈಕ ಪ್ರತಿನಿಧಿಯಾಗಿ ಲಾಲಾಜಿ ಆಯ್ಕೆಯಾಗಿದ್ದಾರೆ. ಮೂರು ಬಾರಿ ಶಾಸಕರಾಗಿರುವ ಇವರು ಕಳಂಕರಹಿತ ರಾಜಕಾರಣಿ ಎಂಬ ಹೆಗ್ಗಳಿಕೆ ಹೊಂದಿದ್ದಾರೆ.
ರಾಜ್ಯದಲ್ಲಿ 39 ವಿವಿಧ ಮೀನುಗಾರ ಸಮುದಾಯದ 80 ಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆ ಇದೆ. ನಿರ್ಲಕ್ಷ ಧೋರಣೆ ತಾಳದೆ ಸೂಕ್ತ ಪ್ರಾತಿನಿಧ್ಯ ನೀಡಬೇಕು. ಲಾಲಾಜಿ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಸಮುದಾಯದ ಮುಖಂಡರು ಒತ್ತಾಯಿಸಿದ್ದಾರೆ.
ರಾಜ್ಯದಲ್ಲಿ ಎಲ್ಲಾ ಸಮುದಾಯದ ಚುನಾಯಿತ ಜನಪ್ರತಿನಿಧಿಗಳಿಗೆ ಸ್ಥಾನಮಾನ ದೊರಕಿದೆ. ಆದರೆ, ಬಿಜೆಪಿಯು ಮೊಗವೀರ ಸಮುದಾಯವನ್ನು ನಿರ್ಲಕ್ಷ ಮಾಡುತ್ತಿದೆ. ಸಮುದಾಯದ ಬಹುತೇಕ ಜನರು ಬಿಜೆಪಿ ಪಕ್ಷದ ಮತದಾರರು. ಯಡಿಯೂರಪ್ಪನವರ ಆಪ್ತ ವಲಯದಲ್ಲಿ ಇರುವ ಲಾಲಾಜಿ ಆರ್ ಮೆಂಡನ್ ಅವರಿಗೆ ಸಚಿವ ಸ್ಥಾನ ನೀಡಲೇಬೇಕು ಎಂದು ಒತ್ತಾಯಿಸಿದ್ದಾರೆ.