ಉಡುಪಿ: ಮಂಗಳವಾರದಿಂದ ರಾಜ್ಯದ ಎಲ್ಲಾ ದೇವಸ್ಥಾನಗಳಲ್ಲಿ ಸೇವೆ ಆರಂಭಗೊಳ್ಳಲಿದೆ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅನ್ನದಾಸೋಹ ಮತ್ತು ಸಮಾರಂಭಗಳಿಗೆ ಅವಕಾಶವಿಲ್ಲ. ಸೇವೆ ಆರಂಭಿಸಲು ಅನುಮತಿ ಕೋರಿ ಆರೋಗ್ಯ ಇಲಾಖೆಯನ್ನು ಸಂಪರ್ಕಿಸಿದ್ದೇವೆ. ಸೆಪ್ಟಂಬರ್ 1 ರಿಂದ ಸೇವೆ ಆರಂಭ ಮಾಡಬೇಕು ಎಂಬುದು ನಮ್ಮ ಗುರಿ. ಈ ಕುರಿತಂತೆ ರಾಜ್ಯ ಮುಖ್ಯ ಕಾರ್ಯದರ್ಶಿ ಜೊತೆ ಮಾತನಾಡಿದ್ದೇವೆ. ಒಳಾಂಗಣದ ಎಲ್ಲಾ ಸೇವೆ ಆರಂಭ ಮಾಡಿ ಎಂದು ಮನವಿ ಮಾಡಿದ್ದೇವೆ ಎಂದರು.
ಚಿನ್ನದ ರಥ ಸೇವೆ, ಬೆಳ್ಳಿರಥ ಸೇವೆ ಹೇಗೆ ಎಂಬ ಬಗ್ಗೆ ಚಿಂತನೆ ನಡೆಸುತ್ತೇವೆ. ಕೋವಿಡ್-19 ಗೈಡ್ಲೈನ್ಸ್ ಪ್ರಕಾರ ನಮ್ಮ ಧಾರ್ಮಿಕ ಸೇವೆ ಆರಂಭವಾಗುತ್ತದೆ. ಆದರೆ ಸಾವಿರಾರು ಜನರು ಒಟ್ಟಿಗೆ ಸೇರುವಂತಿಲ್ಲ. 10 ರಿಂದ 15 ಜನರು ಧಾರ್ಮಿಕ ಸೇವೆ ನಡೆಸುವಂತಹ ಚಿಂತನೆ ನಡೆಸುತ್ತೇವೆ. ಕೋವಿಡ್ ನಿಯಮದ ಮಿತಿಯ ಒಳಗೆ ಎಲ್ಲಾ ಸೇವೆಗಳು ಇರುತ್ತವೆ ಎಂದು ಸಚಿವರು ಸ್ಪಷ್ಟಪಡಿಸಿದರು.