ಉಡುಪಿ: ಎಷ್ಟೇ ನಿಯಂತ್ರಣ ಮಾಡಿದರೂ ಕೊರೊನಾ ಹೆಚ್ಚಾಗುತ್ತಲೇ ಇದೆ. ಹೀಗಾಗಿ, ಸಾಮಾಜಿಕ ಅಂತರ ಕಾಯ್ದುಕೊಂಡು ಕೋವಿಡ್-19 ತಡೆಗೆ ಬೇಕಾದ ಎಲ್ಲಾ ರೀತಿಯ ಕೆಲಸಗಳನ್ನು ಸರ್ಕಾರ ಮಾಡುತ್ತಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ನಾನು, ಡಿಸಿಎಂ ಮತ್ತು ಸಿಎಂ ಅವರನ್ನು ಭೇಟಿಯಾಗಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಮುಂದಿನ ಎರಡು ತಿಂಗಳ ಕಾಲ ಕೊರೊನಾವನ್ನು ಹೇಗೆ ನಿಯಂತ್ರಿಸಬೇಕು ಎಂಬ ಕುರಿತಾಗಿ ಅಧಿಕಾರಿಗಳ ಜೊತೆ ಚರ್ಚಿಸಿದ್ದೇವೆ. ಎಲ್ಲಾ ಖಾಸಗಿ, ಸರ್ಕಾರಿ ಆಸ್ಪತ್ರೆಗಳನ್ನು ಸುಸಜ್ಜಿತವಾಗಿ ಇಡಲಾಗಿದೆ. ಜನಜಾಗೃತಿ ಮೂಲಕ ಕೊರೊನಾವನ್ನು ನಿಯಂತ್ರಣಕ್ಕೆ ತರುತ್ತೇವೆ ಎಂಬ ವಿಶ್ವಾಸ ಸರ್ಕಾರಕ್ಕಿದೆ ಎಂದರು.
ಮಂಗಳೂರು, ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಪ್ರಯಾಣಿಕರು ಆಗಮಿಸುತಿದ್ದಾರೆ. ಇಲ್ಲಿ ಸಾಮಾನ್ಯ ಜನರ ನಡುವೆ ಕೊರೊನಾ ಬೆಳವಣಿಗೆ ಕಾಣುತ್ತಿದೆ ಎಂಬುವುದನ್ನು ಕಂಡಿದ್ದೇವೆ. ಕೊರೊನಾ ನಿಯಂತ್ರಿಸುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಮತ್ತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ಇಡೀ ಸರ್ಕಾರ ಹೋರಾಡುತ್ತಿದೆ ಎಂದು ಹೇಳಿದರು.
ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಆಸ್ಪತ್ರೆಗಳ ಸ್ಥಿತಿಗತಿಗಳ ಕುರಿತು ಮಾತನಾಡಿದ ಸಚಿವರು, ನಿನ್ನೆ ಡಿಸಿಎಂ ಅಶ್ವತ್ಥ್ ನಾರಾಯಣ ಜೊತೆ ಮಾತನಾಡಿ ಎರಡೂ ಜಿಲ್ಲೆಗೆ ಬೇಕಾದ ಐಸಿಯು, ಆ್ಯಂಬುಲೆನ್ಸ್ಗಳನ್ನು ಮಂಜೂರು ಮಾಡಲು ಕೇಳಿಕೊಂಡಿದ್ದೇನೆ. ಅದಕ್ಕೆ ಅವರೂ ಭರವಸೆ ನೀಡಿದ್ದಾರೆ ಎಂದರು.