ಉಡುಪಿ: ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬರ ದೇಹದಲ್ಲಿ ಕಬ್ಬಿಣದ ವಸ್ತುಗಳು ಅಂಟಿಕೊಳ್ಳುತ್ತಿದ್ದು, ಅಚ್ಚರಿಗೆ ಕಾರಣವಾಗಿದೆ. ನಗರದ ರಾಮ್ದಾಸ್ ಶೇಟ್ ನಿನ್ನೆ ರಾತ್ರಿ ವಾಟ್ಸ್ಆ್ಯಪ್ನಲ್ಲಿ ಬಂದ ವಿಡಿಯೋ ಒಂದನ್ನು ನೋಡಿ ತಾವೂ ಪ್ರಯತ್ನ ಮಾಡಿದ್ದಾರೆ. ಈ ವೇಳೆ ಅಚ್ಚರಿಯೊಂದು ಅವರಿಗೆ ಕಾದಿದ್ದು, ಮನೆಯ ಸ್ಪೂನ್ , ಸವುಟು , ಕಾಯಿನ್ ವಸ್ತುಗಳನ್ನು ಅವರ ಚರ್ಮಕ್ಕೆ ಆಯಸ್ಕಾಂತದಂತೆ ಹಿಡಿದುಕೊಳ್ಳತೊಡಗಿತ್ತು.
ನಗರದ ಪಿಪಿಸಿ ಕಾಲೇಜಿನ ಸಮೀಪ ಮನೆ ಮಾಡಿಕೊಂಡಿರುವ ರಾಮದಾಸ್ ಶೇಟ್ ಚಿನ್ನದ ಕೆಲಸ ಮಾಡ್ತಾರೆ. ಆದರೆ, ಈ ಹಿಂದೆ ಅವರಿಗೆ ಈ ಅನುಭವ ಆಗಿರಲಿಲ್ಲವಂತೆ. ನಿನ್ನೆ ರಾತ್ರಿಯಿಂದ ನನಗೆ ಇದು ಗೊತ್ತಾಗಿದೆ, ನನಗಿಬ್ಬರು ಮಕ್ಕಳಿದ್ದಾರೆ, ಹಾಗಾಗಿ ಆತಂಕ ಆಯಿತು. ಬಹುಶಃ ಮೊದಲೇ ಈ ರೀತಿ ಇದ್ದಿರಲೂಬಹುದು. ಆದರೆ, ನನಗೆ ಗೊತ್ತಾಗಿದ್ದು ನಿನ್ನೆ ರಾತ್ರಿಯೇ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಕಳೆದ ಏಪ್ರಿಲ್ನಲ್ಲಿ ರಾಮದಾಸ್ ವ್ಯಾಕ್ಸಿನ್ ತೆಗೆದುಕೊಂಡಿದ್ರಂತೆ. ವ್ಯಾಕ್ಸಿನ್ ಪ್ರಭಾವದಿಂದ ಈ ರೀತಿ ಆಗಿರಬಹುದು ಅನ್ನೋದು ಅವರ ಆತಂಕ. ಆದರೆ ವ್ಯಾಕ್ಸಿನ್ನಿಂದ ಈ ರೀತಿಯ ಸಮಸ್ಯೆ ಆಗೋದಿಲ್ವಂತೆ. ರಾಮದಾಸ್ ಅವರಿಗೆ ಬಿಪಿ, ಶುಗರ್ ಇದ್ದು, ಇದು ಒಂದು ಕಾರಣವಾಗಿರಬಹುದು. ಯಾರೂ ಕೂಡಾ ಆತಂಕಕ್ಕೆ ಒಳಗಾಗಬೇಕಾಗಿಲ್ಲ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ.
ಈಗಾಗಲೇ ರಾಮದಾಸ್ ಅವರನ್ನು ಉಡುಪಿ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆ ಒಳಪಡಿಸಲಾಗಿದ್ದು, ಸುದೀರ್ಘ ಚಿಕಿತ್ಸೆಗೆ ಒಳಪಡಿಸಿದ ನಂತರ ಆಯಸ್ಕಾಂತದ ಕುತೂಹಲಕ್ಕೆ ತೆರೆ ಬೀಳಲಿದೆ.
ಓದಿ: ಜೂ. 16ರಂದು ಬೆಂಗಳೂರಿಗೆ ಬಿಜೆಪಿ ರಾಜ್ಯ ಉಸ್ತುವಾರಿ.. ಆಂತರಿಕ ಸಮಸ್ಯೆಗೆ ಬೀಳುತ್ತಾ ತೆರೆ?