ಉಡುಪಿ: ಮಂಗಳೂರು ವಿಮಾನ ನಿಲ್ದಾಣದಲ್ಲಿ ಸ್ಫೋಟಕ ಪತ್ತೆ ವಿಚಾರಕ್ಕೆ ಸಂಬಂಧಿಸಿದಂತೆ ಆರೋಪಿ ಆದಿತ್ಯರಾವ್ ವಿಚಾರವಾಗಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.
ಏರ್ಪೋರ್ಟ್‌ನಲ್ಲಿ ಸ್ಫೋಟಕ ಇಟ್ಟ ಆದಿತ್ಯರಾವ್ ಅಲ್ಲಿಂದ ನೇರವಾಗಿ ವಡಭಾಂಡೇಶ್ವರದ ಬಲರಾಮ ದೇವರ ಸನ್ನಿಧಿಗೆ ಬಂದಿದ್ದಾನೆ ಎನ್ನುವ ವಿಚಾರ ಗೊತ್ತಾಗಿದೆ.
ಆರೋಪಿ ಬ್ಯಾಂಕ್‌ವೊಂದರಲ್ಲಿ ಲಾಕರ್ ಪಡೆದಿರುವ ಬಗ್ಗೆ ತಿಳಿದಿದ್ದು, ಅಧಿಕಾರಿಗಳು ಆತನನ್ನು ಸಂಬಂಧಿಸಿದ ಬ್ಯಾಂಕ್ಗೆ ಕರೆದೊಯ್ದಿದ್ದಾರೆ. ಈ ವೇಳೆ ಆರೋಪಿಯ ಹೆಸರಿನಲ್ಲಿದ್ದ ಲಾಕರ್ ತೆರೆಸಿದಾಗ, ಅಲ್ಲಿ ಚಿನ್ನಾಭರಣವಿಡುವ ಬಾಕ್ಸ್ನಲ್ಲಿ ಅನುಮಾನಾಸ್ಪದ ಪೌಡರ್ ಪತ್ತೆಯಾಗಿದೆ. ಈ ಪೌಡರ್ ಅನ್ನು ವಶಕ್ಕೆ ಪಡೆದ ಪೊಲೀಸರು ಅದನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ತಪಾಸಣೆಗೆ ಕಳುಹಿಸಲಿದ್ದಾರೆ.
ಎಸಿಪಿ ಬೆಳ್ಳಿಯಪ್ಪ ನೇತೃತ್ವದ ತಂಡ, ಬ್ಯಾಂಕ್ ಲಾಕರ್‌ನಿಂದ ಅನುಮಾನಾಸ್ಪದ ವಸ್ತುಗಳು, ದಾಖಲೆಗಳು ಹಾಗು ಸರ್ಟಿಫಿಕೇಟ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಇವೆಲ್ಲವನ್ನು ನೋಡಿದ್ಮೇಲೆ ವಿಮಾನ ನಿಲ್ದಾಣದಲ್ಲಿ ಸ್ಫೋಟಿಸಲು ವರ್ಷದ ಹಿಂದೆಯಿಂದ ಆತ ತಯಾರಿ ಮಾಡಿದ್ನಾ? ಅನ್ನೋ ಶಂಕೆ ಪೊಲೀಸರದ್ದು.
ಇಷ್ಟೆಲ್ಲಾ ವಿಚಾರಣೆಯ ಬಳಿಕ ಆರೋಪಿ ಆದಿತ್ಯನನ್ನು ಉಡುಪಿಯಿಂದ ಮಲ್ಪೆಗೆ ಕರೆದೊಯ್ದ ಪೊಲೀಸರು ಇಲ್ಲಿನ ವಡಭಾಂಡೇಶ್ವರ ದೇವಸ್ಥಾನದ ಬಳಿ ಮಹಜರು ಮಾಡಿದ್ದಾರೆ. ಮಂಗಳೂರು ಏರ್‌ಪೋರ್ಟ್ ಬಳಿ ಸ್ಫೋಟಕವಿಟ್ಟ ಆದಿತ್ಯ ಸೀದಾ ಇಲ್ಲಿಗೆ ಬಂದಿದ್ದನಂತೆ. ಈ ವೇಳೆ ಇಂಡಿಗೋ ವಿಮಾನದ ಬಳಿ ಮತ್ತೊಂದು ಬಾಂಬ್ ಬ್ಯಾಗ್ ಇಟ್ಟಿರೋದಾಗಿ ಏರ್ಪೋರ್ಟ್ ಟರ್ಮಿನಲ್ ಮ್ಯಾನೇಜರ್ಗೆ ಕರೆ ಮಾಡಿದ್ದಾನೆ. ಈ ಎಲ್ಲಾ ಕರೆಗಳು ಮಲ್ಪೆ ಟವರ್ನಲ್ಲೇ ದಾಖಲಾಗಿವೆ. ಅಲ್ಲದೆ, ಆರೋಪಿಯೂ ಈ ಬಗ್ಗೆ ಒಪ್ಪಿಕೊಂಡಿದ್ದಾನಂತೆ.
ಆದಿತ್ಯ ರಾವ್, ಬಾಂಬ್‌ಗೆ ಫೈನಲ್ ಟಚ್ ಕೊಟ್ಟ ಕಾರ್ಕಳದ ಕಿಂಗ್ಸ್ ಬಾರ್‌ನಲ್ಲಿ ಆದಿತ್ಯನ ಚಟುವಟಿಕೆಗಳ ಮಹಜರು ನಡೆಯಿತು. ಬಾರ್ ಮಾಲೀಕರು-ಸಿಬ್ಬಂದಿಯಿಂದ ಪೊಲೀಸರು ಮಾಹಿತಿ ಪಡೆದು ತನಿಖೆ ಮುಂದುವರೆಸಿದ್ದಾರೆ.