ಉಡುಪಿ : ಕರಾವಳಿಗೆ ಮುಂಗಾರಿನ ಆಗಮನವಾಗಿದ್ದು, ಮಳೆಯಲ್ಲೇ ಉಡುಪಿ ಶ್ರೀ ಕೃಷ್ಣ ದೇವರ ಉತ್ಸವ ನಡೆಯಿತು. ಈ ಉತ್ಸವದಲ್ಲಿ ನೂರಾರು ಭಕ್ತರು ಭಾಗಿಯಾಗುವ ಮೂಲಕ ದೇವರ ಕೃಪೆಗೆ ಪಾತ್ರರಾದರು.
ನಿತ್ಯೋತ್ಸವ ಪ್ರೀಯನಾದ ಕೃಷ್ಣನಿಗೆ ಉಡುಪಿಯ ರಥಬೀದಿಯಲ್ಲಿ ನಿತ್ಯ ಸಂಜೆ ಉತ್ಸವ ನಡೆಸಲಾಗುತ್ತದೆ. ಅದರಂತೆ ನಿನ್ನೆಯೂ ಕೂಡ ಚಿನ್ನದ ರಥದಲ್ಲಿ ಶ್ರೀ ಕೃಷ್ಣ ದೇವರ ಉತ್ಸವ ನಡೆಸಲಾಯಿತು. ಉತ್ಸವದ ನಡುವೆ ಮಳೆ ಆರಂಭವಾಗಿದ್ದು, ರಥಬೀದಿಯಲ್ಲಿ ಕಾಲು ಮುಳುಗುವಷ್ಟು ನೀರಿತ್ತು. ಈ ಮಳೆಯಲ್ಲೆ ದೇವರಿಗೆ ಆರತಿ ನೆರವೇರಿಸಲಾಯಿತು.
ಪರ್ಯಾಯ ಪಲಿಮಾರು ಮಠಾಧೀಶ ವಿದ್ಯಾಧೀಶ ತೀರ್ಥರು ಹಾಗೂ ಅದಮಾರು ಮಠದ ಈಶಪ್ರಿಯ ತೀರ್ಥರು ಸೇರಿದಂತೆ ಅಷ್ಟಮಠ ಯತಿಗಳು ಉತ್ಸವದಲ್ಲಿ ಭಾಗಿಯಾಗಿದ್ದರು. ಭಕ್ತರು ಮಳೆಯಲ್ಲಿ ತೋಯುತ್ತಲೇ ಕೃಷ್ಣ ಜಪ ಮಾಡಿ ರಥ ಎಳೆದಿದ್ದು, ವಿಶೇಷವೆನಿಸಿತು.