ಕಾರ್ಕಳ(ಉಡುಪಿ): ಸರ್ಕಾರದ ಆದೇಶವನ್ನು ಉಲ್ಲಂಘಿಸಿ 10 ನೇ ತರಗತಿ ವಿದ್ಯಾರ್ಥಿಗಳಿಗೆ, ಕಾರ್ಕಳದ ಕಸಬಾ ಗ್ರಾಮದ ಸರ್ಕಾರಿ ಬೋರ್ಡ್ ಹೈಸ್ಕೂಲ್ನಲ್ಲಿ ತರಗತಿಯನ್ನು ನಡೆಸಲಾಗಿದೆ. ಈ ತಪ್ಪಿನ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಮುಖ್ಯೋಪಾಧ್ಯಾಯ ಮತ್ತು ತಾಲೂಕು ಶಿಕ್ಷಣಾಧಿಕಾರಿ ಪರಸ್ಪರ ದೂಷಣೆಯಲ್ಲಿ ತೊಡಗಿದ್ದಾರೆ.
ಎಸ್ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ತರಗತಿಗೆ ಹಾಜರಾಗುವಂತೆ ಮುಖ್ಯೋಪಾಧ್ಯಾಯ ಮುರಳಿ ಪ್ರಭು ತಿಳಿಸಿದ್ದು, ವಿದ್ಯಾರ್ಥಿಗಳು ಕಿ.ಮೀ.ಗಟ್ಟಲೇ ನಡೆದುಕೊಂಡು ತರಗತಿಗೆ ಹಾಜರಾಗಿದ್ದು, ಕೆಲ ವಿದ್ಯಾರ್ಥಿಗಳು ತರಕಾರಿ ವಾಹನದಲ್ಲಿ ಬಂದು ಶಾಲೆಗೆ ಸೇರಿದ್ದಾರೆ.
ಇದರಿಂದಾಗಿ ಸಾಮಾಜಿಕ ಅಂತರ ಪಾಲಿಸುವ ಜವಾಬ್ದಾರಿಯನ್ನು ಮರೆತು, ಕೆಲವು ಪೋಷಕರು ಒಂದೇ ಬೈಕ್ನಲ್ಲಿ ಮೂರ್ನಾಲ್ಕು ಮಕ್ಕಳನ್ನು ಕೂರಿಸಿಕೊಂಡು ಶಾಲೆಗೆ ಬಿಟ್ಟು ತೆರಳಿದ ಪ್ರಸಂಗವೂ ನಡೆದಿದೆ.
ಈ ವಿಚಾರದ ಕುರಿತು ಮುಖ್ಯೋಪಾಧ್ಯಾಯರನ್ನು ವಿಚಾರಿಸಿದಾಗ, ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಸ್. ಶಶಿಧರ್ ಸೂಚನೆಯಂತೆ ತರಗತಿಗಳನ್ನು ನಡೆಸಲಾಗಿದೆ ಎಂದು ಹೇಳುತ್ತಿದ್ದಾರೆ.
ಈ ಬಗ್ಗೆ ಜವಾಬ್ದಾರಿಯಿಲ್ಲದಂತೆ ತಾಲೂಕು ಶಿಕ್ಷಣಾಧಿಕಾರಿಗಳು ವರ್ತಿಸಿದ್ದಾರೆ. ಎಸ್ಎಸ್ಎಲ್ ಸಿ ವಿದ್ಯಾರ್ಥಿಗಳಿಗೆ ತರಗತಿ ನಡೆಸುವಂತೆ ರಾಜ್ಯ ಶಿಕ್ಷಣ ಇಲಾಖೆಯಿಂದ ಅನುಮತಿ ನೀಡಿಲ್ಲ. ಈ ಶಾಲೆಯಲ್ಲಿ ಇಂತಹದೊಂದು ತೀರ್ಮಾನ ತೆಗೆದುಕೊಳ್ಳುವುದಕ್ಕೆ ಹೇಗೆ ಸಾಧ್ಯ ಎಂದು ಪೋಷಕರು ಪ್ರಶ್ನಿಸಿದ್ದಾರೆ.