ಉಡುಪಿ: ಮದುವೆ ಸಮಾರಂಭ ನಡೆಯುತ್ತಿದ್ದ ಮನೆಗೆ ನುಗ್ಗಿದ ಪೊಲೀಸರು ಮದುಮಗ ಸೇರಿದಂತೆ ಹಲವರ ಮೇಲೆ ಲಾಠಿಯಿಂದ ಹಲ್ಲೆ ನಡೆಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.
ವಿವರ:
ಉಡುಪಿಯ ಕೋಟತಟ್ಟು ಗ್ರಾ.ಪಂ ವ್ಯಾಪ್ತಿಯ ಕೊರಗ ಕಾಲನಿಯ ಮನೆಯೊಂದರಲ್ಲಿ ಸೋಮವಾರ ರಾತ್ರಿ ಕೊರಗ ಸಮುದಾಯಕ್ಕೆ ಸೇರಿದ ರಾಜೇಶ್ ಎಂಬವರ ಮದುವೆ ಮೆಹಂದಿ ಕಾರ್ಯಕ್ರಮವಿತ್ತು. ಮೆಹಂದಿಗೆ ಬಂದವರು ಡಿಜೆ ಹಾಕಿ ಡ್ಯಾನ್ಸ್ ಮಾಡುತ್ತಿದ್ದರು. ಈ ವೇಳೆ ಡಿಜೆ ಸಂಗೀತವನ್ನು ಜೋರಾಗಿ ಹಾಕಿದ್ದನ್ನು ಪ್ರಶ್ನಿಸಿ ಮನೆಗೆ ನುಗ್ಗಿದ ಕೋಟ ಪೊಲೀಸರು ಮದುಮಗ ಸೇರಿದಂತೆ ಮಹಿಳೆಯರ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗ್ತಿದೆ.
ಕೋಟ ಎಸ್‌ಐ ಸಂತೋಷ್ ನೇತೃತ್ವದಲ್ಲಿ ಹಲ್ಲೆ ನಡೆಸಿದ ಪೊಲೀಸರ ನಡೆಯನ್ನು ಕೊರಗ ಸಮುದಾಯದವರು ಖಂಡಿಸಿದ್ದಾರೆ. 'ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಹುಟ್ಟೂರಿನಲ್ಲೇ ಈ ರೀತಿ ಆದ್ರೆ ನಮಗೆ ರಕ್ಷಣೆ ಎಲ್ಲಿದೆ?. ನ್ಯಾಯ ಸಿಗುವವರೆಗೆ ಹೋರಾಟ ಮಾಡುತ್ತೇವೆ' ಎಂದು ದಲಿತ ಸಂಘಟನೆ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಎಸ್ಪಿ ವಿಷ್ಣುವರ್ಧನ್, 'ಹಲ್ಲೆ ಆರೋಪ ಕೇಳಿ ಬಂದಿರುವ 6 ಮಂದಿ ಪೊಲೀಸರನ್ನು ವಿಚಾರಣೆ ಮುಗಿಯುವ ತನಕ ಬೇರೆಡೆಗೆ ನಿಯೋಜಿಸಲಾಗುವುದು. ಉಡುಪಿ ಡಿವೈಎಸ್ಪಿ ಪ್ರಕರಣದ ತನಿಖೆ ಆರಂಭಿಸಿದ್ದಾರೆ. ಬುಧವಾರ (ಇಂದು) ಸಂಜೆಯೊಳಗೆ ತನಿಖೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ರಾತ್ರಿ 10 ಗಂಟೆಯ ನಂತರ ಲೌಡ್ ಸ್ಪೀಕರ್ ಚಾಲು ಇದ್ದ ಕಾರಣ ಸ್ಥಳೀಯರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಸಿಬ್ಬಂದಿಯೊಬ್ಬರು ಶಬ್ದ ಕಡಿಮೆ ಮಾಡುವಂತೆ ಸೂಚನೆ ನೀಡಿದ್ದರು. ಮತ್ತೆ 11 ಗಂಟೆಗೆ ದೂರು ಬಂದ ಕಾರಣ ಪಿಎಸ್ಐ ಸ್ಥಳಕ್ಕೆ ಭೇಟಿ ನೀಡಿದ್ದರು. ಹಲ್ಲೆ ನಡೆದಿರುವುದು ನಿಜವಾಗಿದ್ದಲ್ಲಿ ಸಿಬ್ಬಂದಿ ವಿರುದ್ಧ ಖಂಡಿತ ಕ್ರಮ ಕೈಗೊಳ್ಳುತ್ತೇವೆ' ಎಂದು ಭರವಸೆ ನೀಡಿದರು.
ಇದನ್ನೂ ಓದಿ: Sudan Gold Mine Tragedy: ಚಿನ್ನದ ಗಣಿ ಕುಸಿದು, 38 ಮಂದಿ ದುರ್ಮರಣ