ಉಡುಪಿ: ಮಣಿಪಾಲದ ಮಂಚಿಕೆರೆಯ ಕೆಂಪುಕಲ್ಲಿನ ಬಯಲಿನಲ್ಲಿ ಭೂಮಿ ಬಿರುಕು ಬಿಟ್ಟಿದ್ದು, ಜನರಲ್ಲಿ ಆತಂಕ ಮನೆಮಾಡಿದೆ.
ಈ ಪ್ರದೇಶದಲ್ಲಿ ಭೂಕಂಪನವಾಗಿಲ್ಲ, ಆದರೂ ಭೂಮಿ ಅಲ್ಲಲ್ಲಿ ಸೀಳಿ ಹೋದಂತೆ ಬಾಯ್ತೆರೆದಿದೆ. ಇನ್ನು ಇಲ್ಲಿ ಮುಕ್ಕಾಲು ಅಡಿ ಅಗಲ, ಇಪ್ಪತ್ತು ಅಡಿಗೂ ಹೆಚ್ಚು ಆಳದ ಬಿರುಕುಗಳು ಕಂಡುಬಂದಿದ್ದು, ಕುತೂಹಲದ ಜೊತೆಗೆ ಆತಂಕಕ್ಕೂ ಕಾರಣವಾಗಿವೆ.
ಮಂಚಿಕೆರೆ ಎಂಬಲ್ಲಿನ ಬೋಳು ಗುಡ್ಡೆಯಲ್ಲಿ ಈ ಪ್ರಾಕೃತಿಕ ವಿಸ್ಮಯ ಉಂಟಾಗಿದೆ. ಕಳೆದ ಮೂರು ದಿನಗಳಲ್ಲಿ ಈ ಬಿರುಕು ವಿಸ್ತಾರಗೊಂಡಿದೆ ಅಂತ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಆದ್ರೆ ಈ ರೀತಿಯ ಬಿರುಕು ಕಾಣಿಸಿಕೊಂಡಿರೋದು ಇದೇ ಮೊದಲಲ್ಲ. 2014 ರಲ್ಲೂ ಇದೇ ಮಾದರಿಯಲ್ಲಿ ಭೂಮಿ ಬಾಯ್ತೆರೆದಿತ್ತು. ಈ ಬಾರಿ ಹಳೆಯ ಬಿರುಕುಗಳು ಮತ್ತಷ್ಟು ವಿಸ್ತಾರಗೊಂಡಿದ್ದು, ಜೊತೆಗೆ ಹೊಸ ಬಿರುಕುಗಳು ಕಾಣಿಸಿಕೊಂಡಿವೆಯಂತೆ.
ಈ ಪ್ರದೇಶ ಸಾಕಷ್ಟು ಜನವಸತಿಗಳಿಂದ ಕೂಡಿದೆ. ಹಾಗಾಗಿ ಬಿರುಕುಗಳ ಪ್ರಮಾಣ ಹೆಚ್ಚಾದ್ರೆ ಏನು ಮಾಡೋದು ಅಂತ ಸ್ಥಳೀಯರ ಚಿಂತೆ ಮಾಡುತ್ತಿದ್ದಾರೆ. ಈ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಮಂಚಿಕೆರೆ ಪ್ರದೇಶವು ಕೆಂಪುಕಲ್ಲಿನಿಂದ ಆವೃತವಾಗಿದ್ದು, ಭೂ ತಳದಲ್ಲಿ ಉಷ್ಣಾಂಶ ಹೆಚ್ಚಿ ನಿರ್ವಾತ ಪ್ರದೇಶ ಉಂಟಾಗಿರುವ ಶಂಕೆ ಇದೆ. ಮಳೆ ಬಂದಾಗ ಈ ನಿರ್ವಾತ ಪ್ರದೇಶದಲ್ಲಿರುವ ಜೌಗು ಮಣ್ಣು ಕೊಚ್ಚಿಹೋಗಿ ಕಲ್ಲಿನ ಪದರ ಕುಸಿದಿರುವ ಸಾಧ್ಯತೆ ಇದೆ. ಇದು ತಕ್ಷಣಕ್ಕೆ ಅಪಾಯವಿಲ್ಲ. ಆದ್ರೆ ಡೇಂಜರ್ ಝೋನ್ನಲ್ಲಿ ಬರುವ ಮನೆಗಳುನ್ನು ಸ್ಥಳಾಂತರಿಸಿದರೆ ಸೂಕ್ತವೆಂದು ಭೂ ವಿಜ್ಞಾನಿ ರಾಂಜಿನಾಯ್ಕ್ ಹೇಳಿದ್ದಾರೆ.