ಉಡುಪಿ: ನಟ ಸುದೀಪ್ ಅಭಿಮಾನಿ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ನಾಲ್ವರು ಆರೋಪಿಗಳನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ.
ಕುಂದಾಪುರ ಚಿಕನ್‌ಸಾಲ್ ರೋಡ್ ನಿವಾಸಿಯಾಗಿರುವ ಗುರುರಾಜ್ ಪುತ್ರನ್(28), ಸಂತೋಷ (30), ಕಸಬಾ ಗ್ರಾಮದ ಪ್ರದೀಪ್(29), ರವಿರಾಜ್ ಬಂಧಿತ ಆರೋಪಿಗಳಾಗಿದ್ದಾರೆ.
ಇಲ್ಲಿನ ಬ್ರಹ್ಮಾವರದ ಕೋಟತಟ್ಟು ಬಾರಿಕೆರೆ ನಿವಾಸಿ ರತ್ನಾಕರ ಪೂಜಾರಿ ಎಂಬುವರು ನಟ ಸುದೀಪ್ ಅವರ ಅಭಿಮಾನಿಯಾಗಿದ್ದಾರೆ. ವಿನಯ್ ಗುರೂಜಿ ಅವರು ನಟ ಸುದೀಪ್ ಬಗ್ಗೆ ಮಾತನಾಡಿದ್ದನ್ನು ವಿರೋಧಿಸಿ ಸಾಮಾಜಿಕ ಜಾಲತಾಣದಲ್ಲಿ ಬಂದ ಸಂದೇಶವನ್ನು ರತ್ನಾಕರ್ ಫೇಸ್‌ಬುಕ್‌ನಲ್ಲಿ ಶೇರ್ ಮಾಡಿದ್ದಾರೆ.
ಇದರಿಂದ ಆಕ್ರೋಶಗೊಂಡ ಕೆಲವರು ಅಕ್ಟೋಬರ್ 13ರಂದು ಕುಂದಾಪುರ ಸಂಗಮ್ ಶಾಲೆ ಬಳಿ ರತ್ನಾಕರ್ಗೆ, ‘ವಿನಯ್ ಗುರೂಜಿ ಬಗ್ಗೆ ಫೇಸ್‌ಬುಕ್‌ನಲ್ಲಿ ಅವಹೇಳನ ಮಾಡುತ್ತೀಯಾ’ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ, ಬೈಕ್‌ನ ಬಂಪರ್‌ಗೆ ಅಳವಡಿಸುವ ಕಬ್ಬಿಣದ ರಾಡ್‌ನಿಂದ ಹಲ್ಲೆ ಮಾಡಿದ್ದರು ಎನ್ನಲಾಗಿದೆ.
ತೀವ್ರವಾಗಿ ಗಾಯಗೊಂಡ ರತ್ನಾಕರನನ್ನು ಆಸ್ಪತ್ರೆಗೆ ದಾಖಲಿಸಿದ್ದು, ಉಳಿದ ಆರೋಪಿಗಳ ಬಂಧನಕ್ಕೆ 2 ತಂಡಗಳನ್ನು ರಚಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸಾಮಾಜಿಕ ಜಾಲತಾಣವನ್ನು ಜವಾಬ್ದಾರಿಯುತವಾಗಿ, ವಿವೇಚನಾತ್ಮಕವಾಗಿ ಬಳಸುವ ಮೂಲಕ ಇಂತಹ ಘಟನೆಗಳು ನಡೆಯದಂತೆ ಸಹಕರಿಸಬೇಕು ಎಂದು ಜಿಲ್ಲಾ ಪೊಲೀಸ್ ಇಲಾಖೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ.