ಉಡುಪಿ: ಕುಂದಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅತೃಪ್ತರನ್ನು ಇಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಜೆಡಿಎಸ್ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಭೇಟಿಯಾಗಿ ಅಚ್ಚರಿ ಮೂಡಿಸಿದ್ದಾರೆ.
ಕುಂದಾಪುರದಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿದ್ದ ಪ್ರಮೋದ್ ಮಧ್ವರಾಜ್, ದಿಢೀರ್ ಆಗಿ ಬಿಜೆಪಿ ಅತೃಪ್ತ ಬಣವನ್ನು ಭೇಟಿಯಾಗಿ ಬೆಂಬಲ ಯಾಚಿಸಿದ್ದಾರೆ.
ಕಳೆದ ಬಾರಿ ವಿಧಾನಸಭಾ ಚುನಾವಣೆಯ ಸಂದರ್ಭ ಕುಂದಾಪುರದಲ್ಲಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರ ಅಭ್ಯರ್ಥಿತನವನ್ನು ವಿರೋಧಿಸಿ ಬಿಜೆಪಿ ಪಕ್ಷಕ್ಕೆ ರಾಜೀನಾಮೆ ನೀಡಿ ದೂರ ಉಳಿದಿದ್ದ ಬಿಜೆಪಿಯ ಪ್ರಬಲ ಅತೃಪ್ತ ನಾಯಕರಾದ ಕಿಶೋರ್ ಕುಮಾರ್ ಕುಂದಾಪುರ, ಮೆರ್ಡಿ ಸತೀಶ್ ಹೆಗ್ಡೆ, ಜಾನಕಿ ಬಿಲ್ಲವ, ಬಿಜೆಪಿ ಪಕ್ಷದಿಂದ ಉಚ್ಛಾಟನೆಗೊಳಪಟ್ಟ ಪುರಸಭಾ ಮಾಜಿ ಉಪಾಧ್ಯಕ್ಷ ರಾಜೇಶ್ ಕಾವೇರಿ ಸೇರಿದಂತೆ ಹಲವು ಅತೃಪ್ತ ನಾಯಕ ಬಳಿ ಪ್ರಮೋದ್ ಮಧ್ವರಾಜ್ ಈ ಸಂದರ್ಭ ಬೆಂಬಲ ಯಾಚಿಸಿದರು. ಈ ಸಂದರ್ಭ ಕ್ರಿಯಾಶೀಲ ವ್ಯಕ್ತಿಗೆ ಬೆಂಬಲ ನೀಡುವುದಾಗಿ ಅತೃಪ್ತ ಬಿಜೆಪಿಗರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.