ಉಡುಪಿ: ಹಿಜಾಬ್ ಮತ್ತು ಕೇಸರಿ ಶಾಲು ವಿವಾದ ಆರಂಭವಾದ ಉಡುಪಿ ಜಿಲ್ಲೆಯಲ್ಲಿ ನಿನ್ನೆ ಮಹತ್ವದ ಶಾಂತಿ ಸಭೆ ನಡೆದಿದೆ. ಈ ಸಂದರ್ಭದಲ್ಲಿ ಎಲ್ಲ ರಾಜಕೀಯ ಪಕ್ಷಗಳು, ಸಂಘ ಸಂಸ್ಥೆಗಳು ಭಾಗಿಯಾಗಿ ಶಾಂತಿ ಮಂತ್ರ ಪಠಿಸಿವೆ. ಆದರೆ ಹಿಜಾಬ್ ಹೋರಾಟಕ್ಕೆ ನಾಂದಿಯಾದ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಗೈರಾಗಿ ಚರ್ಚೆಗೆ ಕಾರಣವಾಗಿದೆ.
ಮುಸ್ಲಿಂ ವಿದ್ಯಾರ್ಥಿನಿಯರಿಗೆ ತರಗತಿಯಲ್ಲಿ ಹಿಜಾಬ್ ಧರಿಸಲು ಅವಕಾಶ ಕೊಡದ ವಿಚಾರಕ್ಕೆ ಕಳೆದ ಎರಡು ತಿಂಗಳಿನಿಂದ ಉಡುಪಿ ಮಹಿಳಾ ಪಿಯು ಕಾಲೇಜಿನಲ್ಲಿ ಜಟಾಪಟಿ ನಡೆಯುತ್ತಿದೆ. ಪೋಷಕರು ಕಾಲೇಜಿನ ಜಿಲ್ಲಾಡಳಿತ ಮಟ್ಟದ ಸಭೆಯಲ್ಲಿ ಸಮಸ್ಯೆ ಬಗೆಹರಿಯದಿದ್ದಾಗ ಪ್ರಕರಣ ಕೋರ್ಟ್ ಮೆಟ್ಟಿಲೇರಿದೆ.
ಹಿಜಾಬ್ ವಿರುದ್ಧ ಕೇಸರಿ ಸಮರ ನಡೆದು ರಾಜ್ಯವ್ಯಾಪಿ ಹೈಸ್ಕೂಲ್, ಕಾಲೇಜುಗಳಿಗೆ ರಜೆ ನೀಡಲಾಗಿದೆ. ಬೂದಿ ಮುಚ್ಚಿದ ಕೆಂಡದಂತಿರುವ ಉಡುಪಿ ಜಿಲ್ಲೆಯಲ್ಲಿ ಮಹತ್ವದ ಶಾಂತಿ ಸಭೆ ನಡೆದಿದ್ದು. ಹೈಕೋರ್ಟ್ ಆದೇಶ ಪಾಲಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಸಭೆಯಲ್ಲಿ ನಗರಸಭೆ ಅಧ್ಯಕ್ಷರು, ಬಿಜೆಪಿ-ಕಾಂಗ್ರೆಸ್ ಎಸ್ಡಿಪಿಐ ಮುಖಂಡರು, ಉಡುಪಿ ಶ್ರೀ ಕೃಷ್ಣಮಠ, ಜಿಲ್ಲಾ ಮುಸ್ಲಿಂ ಒಕ್ಕೂಟ, ಕ್ರೈಸ್ತ ಧರ್ಮಗುರುಗಳು, ಸಮಾಜಸೇವಕರು ಭಾಗಿಯಾಗಿದ್ದರು. ಜಿಲ್ಲೆಯಾದ್ಯಂತ ಶಾಲಾ ಕಾಲೇಜುಗಳ ಸುತ್ತಮುತ್ತ ಸೆಕ್ಷನ್ 144 ಜಾರಿ ಆಗಿರುವ ಬಗ್ಗೆ ವಿಷಯ ಪ್ರಸ್ತಾಪಿಸಲಾಯಿತು. ಸಮವಸ್ತ್ರ ಇರುವ ಸಂಸ್ಥೆಗಳಲ್ಲಿ ಅದನ್ನು ಕಡ್ಡಾಯ ಮಾಡುವುದು. ಸಮವಸ್ತ್ರ ಇಲ್ಲದ ಕಾಲೇಜುಗಳಲ್ಲಿ ಹಿಜಾಬ್ಗೆ ಅವಕಾಶವಿರುವ ಸಾಧ್ಯತೆ ಇದೆ.
ತಹಶೀಲ್ದಾರ್ ಆಹ್ವಾನದ ಮೇರೆಗೆ ಶೇ. 98ರಷ್ಟು ಮಂದಿ ಶಾಂತಿ ಸಭೆಯಲ್ಲಿ ಭಾಗಿಯಾಗಿದ್ದರು. ಸಭೆಯಲ್ಲಿ ಯಾವುದೇ ಚರ್ಚೆ ಗೊಂದಲಗಳಿಗೆ ಅವಕಾಶ ಇರಲಿಲ್ಲ. ಘಟನೆ ಕುರಿತು ಹಲವರು ಅಭಿಪ್ರಾಯಗಳನ್ನು ತಹಶೀಲ್ದಾರರು ಸಂಗ್ರಹಿಸಿದ್ದಾರೆ. ತಮ್ಮ ಸಮಾಜದ, ವಿವಿಧ ವರ್ಗಗಳ ಮೂಲಕ ಶಾಂತಿ ಕಾಪಾಡುವ ನಿರ್ಧಾರ ತೆಗೆದುಕೊಳ್ಳಲಾಯಿತು.
ಇದನ್ನೂ ಓದಿ: ಇಂದಿನಿಂದ ರಾಜ್ಯಾದ್ಯಂತ 9,10ನೇ ತರಗತಿ ಆರಂಭ