ಉಡುಪಿ : ಕಾಲೇಜೊಂದರ ಹಿಜಾಬ್ ವಿವಾದ ಮತ್ತೊಂದು ಹಂತಕ್ಕೆ ತಲುಪಿದೆ. ವಿದ್ಯಾರ್ಥಿನಿಯ ಭವಿಷ್ಯದ ದೃಷ್ಟಿಯಿಂದ ಆನ್ಲೈನ್ ಕ್ಲಾಸ್ ನಡೆಸಿ, ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲು ಅಭಿವೃದ್ಧಿ ಮಂಡಳಿಯ ಅವಕಾಶ ಕಲ್ಪಿಸಿದೆ. ಆದರೆ, ಮುಸ್ಲಿಂ ವಿದ್ಯಾರ್ಥಿನಿಯರು ಆನ್ಲೈನ್ ತರಗತಿಗಳಿಗೆ ಒಪ್ಪುತ್ತಿಲ್ಲ. ತಮ್ಮ ಹೋರಾಟವನ್ನು ಮುಂದುವರೆಸುವುದಾಗಿ ಹೇಳಿದ್ದಾರೆ.
ಆರು ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಅವಕಾಶ ಬೇಕೇ ಬೇಕು ಅಂತ ಹಠಕ್ಕೆ ಬಿದ್ದಿದ್ದು, ಇತ್ತ ಕಾಲೇಜು ಅಭಿವೃದ್ಧಿ ಮಂಡಳಿ ಯಾವುದೇ ಕಾರಣಕ್ಕೂ ಪಾಠ ಮಾಡುವಾಗ ಹಿಜಾಬ್ ಧರಿಸುವುದಕ್ಕೆ ಅವಕಾಶ ಇಲ್ಲ ಎಂದು ಸ್ಪಷ್ಟನೆ ನೀಡಿದೆ.
ಇದೇ ವಿಚಾರವಾಗಿ, ಮುಸ್ಲಿಂ ಮುಖಂಡ ಜಿ.ಎ.ಭಾವಾ ಅವರ ಜೊತೆ ಸಭೆ ನಡೆಸಿದ ಶಾಲಾ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಹಾಗೂ ಸ್ಥಳೀಯ ಉಡುಪಿ ಶಾಸಕ ರಘುಪತಿ ಭಟ್, ಹಿಜಾಬ್ ಬೇಕೆನ್ನುವ ಆರು ವಿದ್ಯಾರ್ಥಿನಿಯರಿಗೆ ಆನ್ಲೈನ್ ಕ್ಲಾಸ್ ನಡೆಸುವ ತೀರ್ಮಾನ ಕೈಗೊಂಡಿದ್ದಾರೆ. ವಿದ್ಯಾರ್ಥಿನಿಯರ ಭವಿಷ್ಯದ ದೃಷ್ಟಿಯಿಂದ ದ್ವಿತೀಯ ಪಿಯುಸಿ ಮಹತ್ವದ ಘಟ್ಟವಾಗಿದ್ದು, ಹೀಗಾಗಿ ಆನ್ಲೈನ್ ಕ್ಲಾಸ್ ನಡೆಸಿ, ಪರೀಕ್ಷೆಗೆ ಹಾಜರಾಗಲು ಅವಕಾಶ ಕಲ್ಪಿಸಲಾಗಿದೆ.
ಈ ನಡುವೆ ಜಿಲ್ಲೆಗೆ ನೂತನ ಉಸ್ತುವಾರಿ ಸಚಿವರಾಗಿ ನೇಮಕವಾದ, ಎಸ್.ಆಂಗಾರ ಅವರು ಎಲ್ಲರ ಇಚ್ಚೆಯಂತೆ ಕ್ರಮ ಕೈಗೊಳ್ಳುವುದಕ್ಕೆ ಆಗಲ್ಲ. ಸರ್ಕಾರ ಇದಕ್ಕಾಗಿ ಸಮಿತಿ ರಚನೆ ಮಾಡಿದ್ದು, ಅದರ ಆಧಾರದಲ್ಲಿ ತೀರ್ಮಾನ ಕೈಗೊಳ್ಳುತ್ತೇವೆ ಎಂದಿದ್ದಾರೆ.
'ಹಿಜಾಬ್ ಹಾಕಿಯೇ ಕ್ಲಾಸಿಗೆ ಹೋಗುತ್ತೇವೆ': ಆನ್ಲೈನ್ ಕ್ಲಾಸ್ ಮೂಲಕ ಮತ್ತೆ ವಿದ್ಯಾರ್ಥಿಗಳ ಜೊತೆ ನಮ್ಮನ್ನು ತಾರತಮ್ಯ ಮಾಡಬೇಡಿ. ನಾವು ಆನ್ಲೈನ್ ಕ್ಲಾಸ್ ಅಟೆಂಡ್ ಆಗುವುದಿಲ್ಲ ಎಂದು ಉಡುಪಿಯ ಸರಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿನೀಯರು ಹೇಳಿದ್ದಾರೆ.
ಹಿಜಾಬ್ ನಮ್ಮ ಸಂವಿಧಾನಾತ್ಮಕ ಹಕ್ಕು. ನಾವು ಹಿಜಾಬ್ ಹಾಕಿಯೇ ಕಾಲೇಜಿಗೆ ಹೋಗುತ್ತೇವೆ. ಸರ್ಕಾರಿ ಕಾಲೇಜಿನಲ್ಲಿ ನಮಗೆ ನಮ್ಮ ಹಕ್ಕು ಸಿಗದಿದ್ದರೆ, ನಾವು ಬೇರೆಡೆ ಅದನ್ನು ನಿರೀಕ್ಷಿಸಲು ಹೇಗೆ ಸಾಧ್ಯ?. ನಾವು ವಿಜ್ಞಾನ ವಿದ್ಯಾರ್ಥಿಗಳ ಆಗಿರುವುದರಿಂದ ಆನ್ಲೈನ್ ಕ್ಲಾಸ್ನಲ್ಲಿ ಲ್ಯಾಬ್ ಅಟೆಂಡ್ ಮಾಡಲು ಆಗುವುದಿಲ್ಲ ಎಂದಿದ್ದಾರೆ.
ಮುಸ್ಲಿಂ ವಿದ್ಯಾರ್ಥಿನಿಯರು ಆತಂಕಗೊಂಡಿದ್ದಾರೆ: ಕಾಲೇಜಿನ ಉಳಿದ ಮುಸಲ್ಮಾನ ವಿದ್ಯಾರ್ಥಿನಿಯರು ಹಿಜಾಬ್ ಧರಿಸಲು ಸಿದ್ಧರಿದ್ದಾರೆ. ನಮ್ಮ ಮೇಲೆ ನಡೆಯುತ್ತಿರುವ ದೌರ್ಜನ್ಯದಿಂದ ಅವರು ಭಯಗೊಂಡಿದ್ದಾರೆ. ಸರ್ಕಾರಿ ಕಾಲೇಜ್ ಆಗಿರುವುದರಿಂದ ನಮ್ಮ ಹಕ್ಕನ್ನು ಕೇಳುತ್ತಿದ್ದೇವೆ. ತಾರತಮ್ಯ ಮಾಡಬೇಡಿ.
ನಮಗೆ ಆಗುತ್ತಿರುವ ದೌರ್ಜನ್ಯ, ನಿತ್ಯ ಮಾಧ್ಯಮಗಳಲ್ಲಿ ನಮ್ಮ ಸುದ್ದಿಗಳನ್ನು ನೋಡಿ ಇತರ ಮುಸ್ಲಿಂ ವಿದ್ಯಾರ್ಥಿನಿಯರು ಆತಂಕಗೊಂಡಿದ್ದಾರೆ. ಅವರು ನೈತಿಕವಾಗಿ ನಮಗೆ ಬೆಂಬಲ ಸೂಚಿಸಿದ್ದಾರೆ. ಆದರೆ ಯಾರೂ ಮುಂದೆ ಬರುತ್ತಿಲ್ಲ ಎಂದು ವಿದ್ಯಾರ್ಥಿನಿ ಮುಸ್ಕಾನ್ ಜೈನಬ್ ಹೇಳಿದ್ದಾರೆ.
ಶಿಕ್ಷಣದ ಜೊತೆ ಹಿಜಾಬ್ ಹಕ್ಕು ಮುಖ್ಯ: ಕಾಲೇಜಿನ ಇತರ ವಿದ್ಯಾರ್ಥಿನಿಯರು ಎಜುಕೇಶನ್ ತುಂಬಾ ಇಂಪಾರ್ಟೆಂಟ್ ಎಂದು ನಮ್ಮ ಜೊತೆ ಪ್ರತಿಭಟನೆಗೆ ಬರುತ್ತಿಲ್ಲ. ಪ್ರತಿಭಟಿಸದೆ ಕ್ಲಾಸಿಗೆ ಹೋಗುತ್ತಿದ್ದಾರೆ. ನಮಗೂ ಶಿಕ್ಷಣ ಮುಖ್ಯ ಅದರ ಜೊತೆಗೆ ಧರ್ಮ, ಹಿಜಾಬ್ ಹಕ್ಕು ಕೂಡಾ ಮುಖ್ಯ. ಹಿಜಾಬ್ ಇಲ್ಲದೆ ತರಗತಿಯಲ್ಲಿ ಕುಳಿತುಕೊಳ್ಳಲು ನಮಗೆ ಕಂಫರ್ಟ್ ಆಗುವುದಿಲ್ಲ. ಕಾಲೇಜಿನ ಸಮವಸ್ತ್ರದ ಶಾಲ್ನಲ್ಲೇ ನಾವು ಹಿಜಾಬ್ ತಯಾರಿಸಿ ಅದನ್ನು ತೊಟ್ಟುಕೊಂಡು ಕ್ಲಾಸಿನಲ್ಲಿ ಕುಳಿತುಕೊಳ್ಳುತ್ತೇವೆ. ನಾವು ಬೇರೆ ಯಾವುದೇ ವಿಚಾರಕ್ಕೆ ಹಠ ಹಿಡಿದು ಕುಳಿತುಕೊಂಡಿಲ್ಲ ಎಂದಿದ್ದಾರೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಕಾಲೇಜಲ್ಲಿ ಹಿಂದಿನಿಂದಲೂ ಪರಂಪರೆಯಿದೆ ಹಿಜಾಬ್ಗೆ ಅವಕಾಶ ಇಲ್ಲ ಎಂದು ಎಲ್ಲರೂ ಹೇಳುತ್ತಿದ್ದಾರೆ. ಆದರೆ ನಮ್ಮ ಹಿರಿಯರು ಧರಿಸುತ್ತಿದ್ದನ್ನು ನಾವು ನೋಡಿದ್ದೇವೆ. ನಮ್ಮ ಶಿಕ್ಷಣದ ಬಗ್ಗೆ ಯಾರಿಗೂ ಯಾವುದೇ ಒಲವು ಇಲ್ಲ. ನಾವು ಉತ್ತಮವಾದ ಶಿಕ್ಷಣ ಪಡೆದು ಮುಂದೆ ಏನಾದರೂ ಜೀವನದಲ್ಲಿ ಸಾಧಿಸಬೇಕೆಂದು ಇದ್ದೇವೆ. ಅವಕಾಶ ಮಾಡಿಕೊಡಿ ವಿದ್ಯಾರ್ಥಿನಿಯರು ಹೇಳಿಕೊಂಡಿದ್ದಾರೆ.
ಒಟ್ಟಿನಲ್ಲಿ ಉಡುಪಿ ಪದವಿ ಪೂರ್ವ ಕಾಲೇಜಿನ ಹಿಬಾಜ್ ವಿವಾದ ಬೇರೆ ಬೇರೆ ಆಯಾಮ ಪಡೆಯುತ್ತಿದ್ದು, ವಿವಾದ ಹೆಚ್ಚುತ್ತಲೇ ಇದೆ. ಇದರಿಂದ ಇತರ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಹೀಗಾಗಿ ಸರ್ಕಾರ ಆದಷ್ಟು ಬೇಗ ಸ್ಪಷ್ಟ ತೀರ್ಮಾನ ಕೈಗೊಂಡು ವಿವಾದಕ್ಕೆ ಇತಿಶ್ರೀ ಹಾಡಬೇಕಿದೆ.
ಇದನ್ನೂ ಓದಿ: ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ಮಾರಾಮಾರಿ - ಇಬ್ಬರ ಸಾವು, ಐವರಿಗೆ ಗಾಯ!