ಉಡುಪಿ : ಹಿಜಾಬ್-ಕೇಸರಿ ಶಾಲು ವಿವಾದದ ಸಂಬಂಧ ಇಂಟರ್‌ನೆಟ್‌ನಲ್ಲಿ ಬೆದರಿಕೆ ಕರೆಗಳು ಬರುತ್ತಿವೆ ಎಂದು ಶಾಸಕ ಕೆ.ರಘುಪತಿ ಭಟ್ ತಿಳಿಸಿದರು.
ಈ ಕುರಿತಂತೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗಂಭೀರವಾದ ಬೆದರಿಕೆ ಇಲ್ಲ. ಯಾವುದೇ ವ್ಯಕ್ತಿ ಅಥವಾ ನಿರ್ದಿಷ್ಟ ಸಂಘಟನೆಗಳಿಂದ ಬೆದರಿಕೆ ಕರೆ ಬಂದಿಲ್ಲ. ಆದರೆ, ಇಂಟರ್ನೆಟ್ ಕಾಲ್ನಲ್ಲಿ ಬೆದರಿಕೆ ಕರೆಗಳು ಬಂದಿದೆ.
ಈ ಕುರಿತಂತೆ ಯಾವುದೇ ಪ್ರಕರಣ ದಾಖಲಿಸಿಲ್ಲ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕರೆ ಮಾಡಿ ಭದ್ರತೆ ಒದಗಿಸುವುದಾಗಿ ತಿಳಿಸಿದ್ದಾರೆ ಎಂದು ರಘುಪತಿ ಭಟ್ ತಿಳಿಸಿದರು.
ಹಿಜಾಬ್ ವಿಷಯದಲ್ಲಿ ಯಾವುದೇ ಧರ್ಮದ ಬಗ್ಗೆ ಮಾತನಾಡಿಲ್ಲ. ನಾನು ಕಾಲೇಜಿನ ಶಿಸ್ತು, ಸಮವಸ್ತ್ರದ ಬಗ್ಗೆ ಮಾತನಾಡಿದ್ದೇನೆ. ಇದನ್ನು ಎಲ್ಲಾ ಮುಸ್ಲಿಂ ಬಾಂಧವರು ಒಪ್ಪಿದ್ದಾರೆ.
ಬೆಂಗಳೂರಿನಿಂದ ದೊಡ್ಡ ದೊಡ್ಡ ಸ್ಥಾನದಲ್ಲಿದ್ದವರೂ ಕೂಡ ನಾವು ತೆಗೆದುಕೊಂಡ ನಿರ್ಧಾರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ, ರಾಜಕೀಯ ಲಾಭಕ್ಕಾಗಿ ಕೆಲವರು ವಿರೋಧ ಮಾಡಿದ್ದಾರೆ ಎಂದರು.
ಹೈದರಾಬಾದ್‌ನಿಂದ ಇಂಟರ್‌ನೆಟ್ ಕರೆ ಮಾಡಿದ ವ್ಯಕ್ತಿಯೊಬ್ಬ ಜೀವ ಬೆದರಿಕೆ ಹಾಕಿದ್ದಾನೆ. ಸ್ಥಳೀಯವಾಗಿ ಎರಡು ಕರೆಗಳು ಬಂದಿವೆ. ಪಾಕಿಸ್ತಾನಿ ಟಿವಿ ಚಾಲೆನ್ ನೋಡಿ ಉಡುಪಿಯಲ್ಲಿ ಬರ್ಖಾವನ್ನು ನಿಷೇಧ ಮಾಡಿದ್ದಾರೆ ಎಂದು ಭಾವಿಸಿ ವಿರೋಧ ವ್ಯಕ್ತಪಡಿಸಿದ್ದಾರೆ ಎಂದರು.
ನನಗೆ ಬೆದರಿಕೆ ಕರೆಗಳು ಹೊಸದಲ್ಲ, ಅವುಗಳಿಗೆಲ್ಲ ತಲೆ ಕೆಡಿಸಿಕೊಳ್ಳುವುದಿಲ್ಲ. ಬೆದರಿಕೆ ಕರೆಗಳ ಸಂಬಂಧ ಭದ್ರತೆಯ ಅವಶ್ಯಕತೆ ಇಲ್ಲ. ದೇವರು ಹಾಗೂ ಉಡುಪಿ ಕ್ಷೇತ್ರದ ಜನರು ನನಗೆ ಭದ್ರತೆ ನೀಡುತ್ತಾರೆ ಎಂದರು.