ಉಡುಪಿ/ಶಿವಮೊಗ್ಗ: ಹೈಕೋರ್ಟ್ನಲ್ಲಿ ಹಿಜಾಬ್ ಕುರಿತು ಇಂದು ಮಹತ್ವದ ತೀರ್ಪು ಪ್ರಕಟವಾಗುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲೆಯ ಶಾಲಾ - ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಡಳಿತಗಳು ಆದೇಶಿಸಿವೆ.
ಹಿಜಾಬ್ ತೀರ್ಪು ಪ್ರಕಟ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮವಾಗಿ ರಜೆ ಘೋಷಣೆ ನಿರ್ಧಾರ ಕೈಗೊಳ್ಳಲಾಗಿದ್ದು, ಮುಂದಿನ ಆದೇಶದವರೆಗೂ ಮುಂದುವರಿಯಲಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಕೂರ್ಮ ರಾವ್ ಆದೇಶ ಹೊರಡಿಸಿದ್ದಾರೆ.
ಶಾಲಾ-ಕಾಲೇಜುಗಳಿಗೆ ರಜೆ ಇದ್ದರೂ ಪರೀಕ್ಷೆ ನಡೆಸಲು ವಿನಾಯಿತಿ ನೀಡಲಾಗಿದೆ. ಇಂದು ಜಿಲ್ಲೆಯಾದ್ಯಂತ 144 ಸೆಕ್ಷನ್ ಜಾರಿ ಮಾಡಿರುವ ಜಿಲ್ಲಾಡಳಿತ, ಶಾಲಾ - ಕಾಲೇಜುಗಳ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಹೇರಲಾಗಿದೆ. ನಿಷೇಧಾಜ್ಞೆ ಹಿನ್ನೆಲೆ ಸಂಭ್ರಮಾಚರಣೆ, ಪ್ರತಿಭಟನೆ, ವಿಜಯೋತ್ಸವ, ಸಾರ್ವಜನಿಕ ಸಭೆ ಸಮಾರಂಭಕ್ಕೆ ಜಿಲ್ಲಾಡಳಿತ ಬ್ರೇಕ್ ಹಾಕಿದೆ.
ಇನ್ನು ಹೈಕೋರ್ಟ್ ತೀರ್ಪು ಹಿನ್ನೆಲೆ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
(ಇದನ್ನೂ ಓದಿ: ಹಿಜಾಬ್ ವಿವಾದದ ಬಗ್ಗೆ ಇಂದು ಮಹತ್ವದ ತೀರ್ಪು ಪ್ರಕಟಿಸಲಿರುವ ರಾಜ್ಯದ ಹೈಕೋರ್ಟ್!)
ಶಿವಮೊಗ್ಗ ಜಿಲ್ಲೆಯಾದ್ಯಂತ ಪೊಲೀಸ್ ಕಟ್ಟೆಚ್ಚರ: ಶಿವಮೊಗ್ಗದಲ್ಲೂ ನಿಷೇಧಾಜ್ಞೆ ಘೋಷಿಸಲಾಗಿದ್ದು, ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಜಿಲ್ಲೆಯ ಎಲ್ಲಾ ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ ಹಾಗೂ ಶಾಲಾ ಕಾಲೇಜು ಆವರಣದಲ್ಲಿ 144 ನಿಷೇಧಾಜ್ಞೆ ಜಾರಿ ಮಾಡಿ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆದೇಶ ಹೊರಡಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯಲ್ಲಿ ಹಿಜಾಬ್, ಕೇಸರಿ ವಿವಾದ ತಾರಕಕ್ಕೇರಿ ಲಾಠಿಚಾರ್ಚ್ ಆಗಿ ನಿಷೇಧಾಜ್ಞೆ ಸಹ ಹೊರಡಿಸಲಾಗಿತ್ತು. ಹಾಗಾಗಿ ಇಂದು ಹಿಜಾಬ್ ವಿವಾದದ ತೀರ್ಪು ಪ್ರಕಟವಾಗುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸ್ ಕಟ್ಟೆಚ್ಚರ ವಹಿಸಲಾಗಿದೆ.
ಜಿಲ್ಲೆಯಲ್ಲಿ ಒಟ್ಟು ಎಂಟು ಕೆಎಆರ್ಪಿ ತುಕಡಿ ಹಾಗೂ ಎಂಟು ಡಿಆರ್ ತುಕಡಿ ಹಾಗೂ ಒಂದು ಆರ್ಎಎಫ್ ತುಕಡಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ ಎಂದು ಎಸ್ಪಿ ಲಕ್ಷ್ಮೀ ಪ್ರಸಾದ್ ತಿಳಿಸಿದ್ದಾರೆ.