ಉಡುಪಿ: ಕರಾವಳಿಯನ್ನು ಬೆಚ್ಚಿಬೀಳಿಸಿದ ಮಂಗಳೂರು ಬಾಂಬ್ ಪತ್ತೆ ಪ್ರಕರಣದಿಂದ, ಇತರೆ ಜಿಲ್ಲೆಗಳಲ್ಲೂ ಆತಂಕದ ವಾತಾವರಣ ನಿರ್ಮಾಣವಾಗಿದೆ. ಮಂಗಳೂರಲ್ಲಿ ಬಾಂಬ್ ಪತ್ತೆ ಆಗುತ್ತಿದ್ದಂತೆ ಕರಾವಳಿಯ ಇತರ ಜಿಲ್ಲೆಗಳಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಉಡುಪಿಯ ರೈಲ್ವೆ ನಿಲ್ದಾಣ, ಕೃಷ್ಣ ಮಠ ಮತ್ತು ಮಲ್ಪೆ ಬೀಚ್ಗಳಲ್ಲೂ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ.
ಉಡುಪಿ ಜಿಲ್ಲೆಗೆ ದೇಶದ ವಿವಿಧ ಭಾಗಗಳಿಂದ ಪ್ರವಾಸಿಗರು ಆಗಮಿಸುವುದರಿಂದ, ಸಹಜವಾಗಿ ಆತಂಕ ಹೆಚ್ಚಾಗಿದೆ. ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ಇಲ್ಲದಿದ್ದರೂ ರೈಲು ಮೂಲಕ ಹೆಚ್ಚು ಪ್ರವಾಸಿಗರು ಬರುತ್ತಾರೆ. ಈ ಕಾರಣದಿಂದ ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ಪೊಲೀಸರು ಹೆಚ್ಚಿನ ತಪಾಸಣೆ ಮಾಡುತ್ತಿದ್ದಾರೆ.
ಜಿಲ್ಲೆಯಲ್ಲಿ ವರ್ಷದ ಬಹುತೇಕ ಸಮಯಗಳಲ್ಲಿ ಅತೀ ಹೆಚ್ಚು ಭಕ್ತಾದಿಗಳು ಹಾಗೂ ಪ್ರವಾಸಿಗರು ಆಗಮಿಸುವ ಅನೇಕ ಪ್ರದೇಶಗಳಿವೆ. ಅದರಲ್ಲೂ ಕೊಲ್ಲೂರು, ಉಡುಪಿ, ಹಟ್ಟಿ, ಅಂಗಡಿ, ಕುಂಭಾಸಿ, ಕಾರ್ಕಳ ಸೇರಿದಂತೆ ಅನೇಕ ಪುಣ್ಯ ಕ್ಷೇತ್ರಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಉಡುಪಿಯ ಮಲ್ಪೆ ಬೀಚ್ ಹಾಗೂ ಮರವಂತೆ ಬೀಚ್ಗಳು ವಾರಾಂತ್ಯದಲ್ಲಿ ಜನರಿಂದ ತುಂಬಿರುತ್ತವೆ. ಈ ನಿಟ್ಟಿನಲ್ಲಿ ಜನದಟ್ಟಣೆಯ ಪ್ರದೇಶಗಲ್ಲಿ ಹೆಚ್ಚಿನ ನಿಗಾ ವಹಿಸಲಾಗಿದೆ.
ಈ ಕುರಿತಾಗಿ ಮಾಹಿತಿ ನೀಡಿದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರ್ ಚಂದ್ರ, ಉಡುಪಿಯಲ್ಲಿ ಪ್ರತಿ ನಿತ್ಯವೂ ಆಯಕಟ್ಟಿನ ಪ್ರದೇಶಗಳಲ್ಲಿ ತಪಾಸಣೆ ನಡೆಸಲಾಗುತ್ತದೆ. ಉಡುಪಿಯ ಎಲ್ಲಾ ಭಾಗಗಳಲ್ಲೂ ಹೆಚ್ಚಿನ ರೀತಿಯಲ್ಲಿ ತಪಾಸಣೆ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ.
ಎರಡು ದಿನಗಳ ಹಿಂದೆ ಪರ್ಯಾಯ ನಡೆದಿದ್ದು, ಹೆಚ್ಚಿನ ಭದ್ರತಾ ವ್ಯವಸ್ಥೆ ಮಾಡಲಾಗಿತ್ತು. ಸದ್ಯ ಮಂಗಳೂರಲ್ಲಿ ಬಾಂಬ್ ಪತ್ತೆಯಾದ ಕಾರಣ ಉಡುಪಿಯಲ್ಲೂ ಅಘೋಷಿತ ಹೈಅಲರ್ಟ್ ಕಂಡು ಬಂದಿದೆ. ಸದಾ ಶಾಂತಿಯ ಜಿಲ್ಲೆಯಾಗಿದ್ದ ಉಡುಪಿಯಲ್ಲೂ ಆತಂಕದ ಛಾಯೆ ಮೂಡಿದೆ.