ಉಡುಪಿ: ಸಿಎಂ ಕುಮಾರಸ್ವಾಮಿ, ಮಾಜಿ ಪ್ರಧಾನಿ ದೇವೇಗೌಡ ಚಿಕಿತ್ಸೆಗಾಗಿ ತಂಗಿರುವ ಉಡುಪಿಯ ಸಾಯಿರಾಧಾ ರೆಸಾರ್ಟ್‌ನಲ್ಲಿ ಎಲ್ಲರಿಗೂ ಟೆನ್ಶನ್ ಟೆನ್ಶನ್ ಟೆನ್ಶನ್. ಒಂದು ಕಡೆ ಸಿಎಂ ಕುಮಾರಸ್ವಾಮಿಗೆ ಮಂಡ್ಯ ಗೆಲುವಿನ ಚಿಂತೆಯಾದ್ರೆ, ಇನ್ನೊಂದು ಕಡೆ ಸಚಿವ ಜಿ.ಟಿ.ದೇವೇಗೌಡ ಹೇಳಿಕೆಯ ಟೆನ್ಶನ್. ಇನ್ನು ಪೊಲೀಸರಿಗಂತೂ ಮಾಧ್ಯಮಗಳ ನಿರ್ಬಂಧದ ಬಗ್ಗೆ ಟೆನ್ಶನ್. ಹಾಗಾದ್ರೆ ಸಿಎಂ ಮೂರನೇ ದಿನದ ರೆಸಾರ್ಟ್ ವಾಸ್ತವ್ಯದಲ್ಲಿ ಏನೇನಾಯ್ತು ಅನ್ನೋ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.
ಹೌದು, ಸಿಎಂ ಕುಮಾರಸ್ವಾಮಿ ಚಿಕಿತ್ಸೆಗಾಗಿ ಉಡುಪಿ ಕಾಪುವಿನ ಹೆಲ್ತ್ ರೆಸಾರ್ಟ್‌ಗೆ ಬಂದಿದ್ದಾರೆ. ರಾಜಕೀಯ ಜಂಜಾಟದಿಂದ ದೂರವಿರಬೇಕು ಎಂದಿದ್ದ ಸಿಎಂಗೆ ಪ್ರಸಕ್ತ ರಾಜಕೀಯ ಬೆಳವಣಿಗೆ ಆತಂಕ ಉಂಟುಮಾಡಿದೆ. ಮಂಡ್ಯದಲ್ಲಿ ಪುತ್ರ ನಿಖಿಲ್ ಕುಮಾರಸ್ವಾಮಿ ಸೋಲು ಗೆಲುವಿನ ಲೆಕ್ಕಾಚಾರದ ಬಗ್ಗೆ ಸಿಎಂ ತಲೆಕೆಡಿಸಿಕೊಂಡಿದ್ದಾರೆ. ನಿನ್ನೆ ತಡರಾತ್ರಿ ಮಂಡ್ಯ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಅವರನ್ನು ರೆಸಾರ್ಟ್‌ಗೆ ಕರೆಸಿಕೊಂಡಿದ್ದಾರೆ. ಮಂಡ್ಯ ಚುನಾವಣೋತ್ತರ ಸಮೀಕ್ಷೆಗಳ ಬಗ್ಗೆ ಮಾಹಿತಿ ಕಲೆಹಾಕಿದ್ದಾರೆ.
ಈ ನಡುವೆ ಜೆಡಿಎಸ್ ಕಾರ್ಯಕರ್ತರು ಬಿಜೆಪಿಗೆ ಮತ ಹಾಕಿದ್ದಾರೆ ಎಂಬ ಸಚಿವ ಜಿ.ಟಿ.ದೇವೇಗೌಡ ಹೇಳಿಕೆಯ ಬಗ್ಗೆ ಸಿಎಂಗೆ ತಳಮಳ ಶುರುವಾಗಿದೆ. ಇದರ ಟೆನ್ಶನ್ನಲ್ಲಿ ಸಿಎಂ ಕುಮಾರಸ್ವಾಮಿ ಹೆಚ್ಚುವರಿ ಮೂರು ಟಿವಿಗಳನ್ನು ತರಿಸಿಕೊಂಡಿದ್ದಾರೆ. ಚಿಕಿತ್ಸೆಯ ನಡುವೆಯೂ ಪ್ರಸಕ್ತ ರಾಜಕೀಯ ಬೆಳವಣಿಗೆ ತಿಳಿದುಕೊಳ್ಳಲು ರೆಸಾರ್ಟ್‌ನಲ್ಲಿ ಎಲ್ಲಾ ನ್ಯೂಸ್ ಚಾನೆಲ್‌ಗಳು ಆನ್ ಆಗಿವೆ ಎಂದು ತಿಳಿದುಬಂದಿದೆ.
ಸಿಎಂಗೆ ಚಿಕಿತ್ಸೆಯ ನಡುವೆ ರಾಜಕೀಯದ ಬಗ್ಗೆಯೇ ಚಿಂತೆಯಾದ್ರೆ, ಇನ್ನೊಂದು ಕಡೆ ಪೊಲೀಸರಿಗೆ ಮಾಧ್ಯಮದವರನ್ನು ನಿರ್ಬಂಧಿಸುವುದೇ ಚಿಂತೆ. ಸಾಯಿರಾಧಾ ರೆಸಾರ್ಟ್ ಮುಂದೆ ಮಾಧ್ಯಮದವರ ಮೇಲೆ ಪೊಲೀಸರು ದರ್ಪ ತೋರಿಸಿದ್ದಾರೆ. ಸಾರ್ವಜನಿಕ ರಸ್ತೆಯಲ್ಲಿ ನಿಂತು ಶೂಟ್ ಮಾಡುತ್ತಿದ್ದ ಕ್ಯಾಮರಾಮನ್ನನ್ನು ಎಸ್ಐವೊಬ್ಬರು ದರ್ಪ ತೋರಿದ್ದಾರೆ. ಜೊತೆಗೆ ಮತ್ತೊಬ್ಬ ಎಸ್ಐ ಅವಾಚ್ಯ ಶಬ್ದಗಳನ್ನು ಬಳಸಿ ನಿಂದಿಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
ಪೊಲೀಸರಿಂದ ಸಾರ್ವಜನಿಕರ ಮೇಲೆ ದಬ್ಬಾಳಿಕೆ ನಡೆದಿದೆ. ರೆಸಾರ್ಟ್ ಸುತ್ತಲಿನ ಮನೆಯವರಿಗೆ ಪೊಲೀಸರು ಬೆದರಿಕೆ ಹಾಕಿ, ಮಾಧ್ಯಮದವರಿಗೆ ಆಶ್ರಯ ನೀಡದಂತೆ ಒತ್ತಡ ಹಾಕಿದ್ದಾರೆ. ಒಂಟಿ ಮಹಿಳೆ ಇದ್ದ ಮನೆಗೆ ಬಂದು ನಿಮ್ಮ ಮನೆಯ ದಾಖಲೆ ಕೊಡಿ, ಮುಂದೆ ನಿಮ್ಮ ಮೇಲೂ ಕ್ರಮ ಆಗುತ್ತೆ ಎಂದು ಎಸ್ಐವೊಬ್ಬರು ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ಈ ನಡುವೆ ವಿಧಾನ ಪರಿಷತ್ ಸದಸ್ಯ ಬಿ.ಎಂ.ಫಾರೂಕ್ ರೆಸಾರ್ಟ್‌ಗೆ ದೌಡಾಯಿಸಿದ್ದಾರೆ. ಇನ್ನು ರೆಸಾರ್ಟ್ ಒಳಗಿನ ಚಲನವಲನ ಹೊರಗಡೆ ಗೊತ್ತಾಗದ ಹಾಗೆ ಎರಡನೇ ಹಂತದಲ್ಲಿ ಪರದೆ ಅಳವಡಿಸಲಾಗಿದೆ. ಒಳಗಿನ ಮಾಹಿತಿ ಹೊರ ಹೋಗದಂತೆ ರೆಸಾರ್ಟ್ ಸಿಬ್ಬಂದಿಗೂ ಮೊಬೈಲ್ ತೆಗೆದುಕೊಂಡು ಹೋಗದಂತೆ ನಿರ್ಬಂಧ ವಿಧಿಸಲಾಗಿದೆ ಎನ್ನಲಾಗುತ್ತಿದೆ.