ಉಡುಪಿ: ಕೋವಿಡ್ ವಾರಿಯರ್ ಆಗಿ ಸೇವೆ ಸಲ್ಲಿಸುತ್ತಾ ಇಲ್ಲಿಯವರೆಗೆ ರಾಜ್ಯದಲ್ಲಿ 27 ಜನ ಅಂಗನವಾಡಿ ಕಾರ್ಯಕರ್ತೆಯರು ಸಾವನ್ನಪ್ಪಿದ್ದಾರೆ. ಆದರೆ 26 ಮಂದಿಗೆ ಸರಕಾರ ಪರಿಹಾರ ನೀಡದೇ ನೆಪ ಹೇಳುತ್ತಿದೆ ಎಂದು ಉಡುಪಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಸಂಘದ ರಾಜ್ಯಾಧ್ಯಕ್ಷೆ ವರಲಕ್ಷ್ಮೀ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾಧ್ಯಮಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, 2600 ರೂ. ಸಂಬಳ ಪಡೆಯುವ ಬಿಸಿಯೂಟ ನೌಕರರಿಗೆ ಸೆಪ್ಟೆಂಬರ್ನಿಂದ ಸಂಬಳ ನೀಡಿಲ್ಲ. ನಾಲ್ಕು ತಿಂಗಳ ಸಂಬಳ ಸರಕಾರ ಬಾಕಿ ಇರಿಸಿದೆ. ಎಲ್ಲ ಕೆಲಸಗಳನ್ನು ಮಾಡಿಸಿ ಸರಕಾರ ನಮಗೆ ಅನ್ಯಾಯ ಎಸಗಿದೆ ಎಂದು ಆರೋಪಿಸಿದರು.
ಪ್ರತೀ ಬಾರಿ ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆ ಈಡೇರಿಸುವ ಭರವಸೆ ಮಾತ್ರ ಸಿಗುತ್ತಿದೆ. ಬೇಡಿಕೆ ಈಡೇರದಿದ್ದರೆ ಬಜೆಟ್ ಸೆಷನ್ ಸಂದರ್ಭ ವಿಧಾನ ಸೌಧ ಚಲೋ ಹಮ್ಮಿಕೊಳ್ಳುತ್ತೇವೆ ಎಂದು ವರಲಕ್ಷ್ಮೀ ಹೇಳಿದರು.