ಉಡುಪಿ : ಪೇಜಾವರ ಮಠ ನಡೆಸುವ ನೀಲಾವರ ಗೋಶಾಲೆಯಲ್ಲಿ ದನಗಳಿಗೆ ಮೇವು ಒದಗಿಸುವುದೇ ದೊಡ್ಡ ಸಮಸ್ಯೆಯಾಗಿದೆ. ಹೀಗಾಗಿ " ಗೋವಿಗಾಗಿ ಮೇವು ಎಂಬ ಅಭಿಯಾನಕ್ಕೆ ಉಡುಪಿಯ ವಿಶ್ವ ಪ್ರಸನ್ನ ತೀರ್ಥ ಶ್ರೀಗಳು ಕರೆ ನೀಡಿದ್ದಾರೆ.
ನೀಲಾವರ ಗೋ ಶಾಲೆಯಲ್ಲಿ ಸುಮಾರು 3,000ದಷ್ಟು ಜಾನುವಾರುಗಳಿವೆ. ಇವುಗಳ ಮಾಸಿಕ ನಿರ್ವಹಣೆಗೆ 20 ಲಕ್ಷ ರೂ. ಬೇಕಾಗುತ್ತದೆ. ಇನ್ನೊಂದು ವಿಚಾರ ಎಂದರೆ ಸಾವಿರಾರು ದನಗಳಿದ್ದರೂ ಇಲ್ಲಿ ಪ್ರತಿದಿನ ಸಂಗ್ರಹವಾಗುವ ಹಾಲು ಕೇವಲ 20 ಲೀ. ಮಾತ್ರ. ಏಕೆಂದರೆ ಕಸಾಯಿ ಖಾನೆಗೆ ಸಾಗಿಸುವಾಗ ರಕ್ಷಿಸಲಾದ ಗಾಯಾಳು ದನಗಳು, ಕೃಷಿಕರು ಕೈ ಬಿಟ್ಟ ಮುದಿ ದನಗಳು, ರಸ್ತೆ ಬದಿಯಲ್ಲಿ ಬಿದ್ದ ಗಾಯಾಳು ದನಗಳು, ಹೆಚ್ಚಾಗಿ ಎತ್ತುಗಳ ಲಾಲನೆ ಪಾಲನೆ ಮಾಡಲಾಗುತ್ತೆ. ಈ ದನಗಳಿಂದ ಯಾವುದೇ ಹಾಲು ಅಥವಾ ಇತರ ಉತ್ಪನ್ನಗಳು ಸಿಗುವುದಿಲ್ಲ. ಹೀಗಾಗಿ ಇವುಗಳಿಗೆ ಮೇವು ಒದಗಿಸುವುದೇ ದೊಡ್ಡ ಸವಾಲು. ಇದನ್ನು ಮನಗಂಡ ಶ್ರೀಗಳು ಗೋವಿಗಾಗಿ ಮೇವು ಎಂಬ ವಿಶೇಷ ಅಭಿಯಾನಕ್ಕೆ ಕರೆ ನೀಡಿದ್ದಾರೆ.
ಭಕ್ತರು, ಗೋ ಪ್ರೇಮಿಗಳು ಗೋವಿಗಾಗಿ ಮೇವು ಅಭಿಮಾನ ಕೈಗೊಂಡು, ಸ್ವಂತ ಜಾಗದಲ್ಲಿ, ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಇದ್ದ ಹಸಿ ಹುಲ್ಲನ್ನು ತಂದುಕೊಡುತ್ತಿದ್ದಾರೆ. ಯುವಕರು ಸಾಮಾಜಿಕ ಜಾಲತಾಣದ ಮೂಲಕ ಒಂದಾಗಿ ರಜಾ ದಿನಗಳಲ್ಲಿ ಹಸಿ ಹುಲ್ಲನ್ನು ತಂದು ಜಾನುವಾರುಗಳಿಗೆ ನೀಡುತ್ತಿದ್ದಾರೆ.