ಉಡುಪಿ: ಗ್ರೀನ್ ಝೋನ್ನಲ್ಲಿದ್ದ ಜಿಲ್ಲೆಯಲ್ಲಿ ಕೊರೊನಾ ಪ್ರಕರಣ ಪತ್ತೆಯಾಗಿದ್ದು, ಐವರಿಗೆ ಸೋಂಕು ತಗುಲಿದೆ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಮತ್ತು ಜಿಲ್ಲಾಧಿಕಾರಿ ದೃಢ ಪಡಿಸಿದ್ದಾರೆ.
ಮೇ 13 ರಂದು ದುಬೈನಿಂದ ಜಿಲ್ಲೆಗೆ ಒಟ್ಟು 49 ಜನರು ವಾಪಸ್ ಆಗಿದ್ದರು. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಬಂದಿದ್ದರು. ಅದರಲ್ಲಿ 5 ಮಂದಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಸೋಂಕಿತರಿಗೆ ಕೋವಿಡ್ ಆಸ್ಪತ್ರೆ ಟಿಎಂಎ ಪೈಯಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ. ಈ ಎಲ್ಲ ಸೋಂಕಿತರು IX-384 ವಿಮಾನದಲ್ಲಿ ಆಗಮಿಸಿದ್ದರು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಮಾಹಿತಿ ನೀಡಿದರು.
ಐದು ಜನ ಸೋಂಕಿತರ ಮಾಹಿತಿ ಇಲ್ಲಿದೆ:
- ರೋಗಿ ನಂ-1028 - 52 ವರ್ಷದ ಗಂಡು
- ರೋಗಿ ನಂ-1029 - 31 ವರ್ಷದ ಗಂಡು
- ರೋಗಿ ನಂ-1030 - 33 ವರ್ಷದ ಮಹಿಳೆ
- ರೋಗಿ ನಂ-1031 - 38 ವರ್ಷದ ಮಹಿಳೆ
- ರೋಗಿ ನಂ-1032 -37 ವರ್ಷದ ಪುರುಷ
ದುಬೈನಿಂದ ಬಂದ 49 ಜನರ ಗಂಟಲ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಆರೋಗ್ಯ ಅಧಿಕಾರಿಗಳ ತುರ್ತು ಸಭೆಯನ್ನು ಕರೆಯಲಾಗಿದೆ. ಸೋಂಕಿತರನ್ನು ಕೂಡಲೇ ಆಸ್ಪತ್ರೆಗೆ ಸ್ಥಳಾಂತರಿಸಲಾಗುವುದು. 49ರ ಪೈಕಿ 47 ವರದಿಗಳು ಕೈ ಸೇರಿವೆ. ಇನ್ನು ಎರಡು ವರದಿಗಳಿಗಾಗಿ ಜಿಲ್ಲಾಡಳಿತ ಕಾಯುತ್ತಿದೆ. ಸೋಂಕಿತರಲ್ಲಿ ಯಾರೂ ಗರ್ಭಿಣಿಯರು ಇಲ್ಲ. ಸೋಂಕಿತರಲ್ಲಿ ನಾಲ್ಕು ಮಂದಿ ಹೋಟೆಲ್ಗಳಲ್ಲಿ ತಂಗಿದ್ದರು. ಒಬ್ಬರು ಸರ್ಕಾರಿ ಕ್ವಾರಂಟೈನ್ನಲ್ಲಿದ್ದರು. ಇವರನ್ನೆಲ್ಲ ಉಡುಪಿ ನಗರದಲ್ಲಿರುವ ಕೋವಿಡ್ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ ಎಂದರು.