ಉಡುಪಿ : ಸಮುದ್ರ ಮಧ್ಯದಲ್ಲಿ ಸಿಕ್ಕಿ ಹಾಕಿಕೊಂಡಿದ್ದ ದೋಣಿ ಹಾಗೂ ನಾಲ್ವರು ಮೀನುಗಾರರನ್ನು ಕರಾವಳಿ ಕಾವಲು ಪೊಲೀಸರು ರಕ್ಷಿಸಿದ ಘಟನೆ ಗಂಗೊಳ್ಳಿ ಸಮೀಪ ನಡೆದಿದೆ.
ದೋಣಿಯ ಎಂಜಿನ್ ವೈಫಲ್ಯದಿಂದ ದೋಣಿ ಸಮುದ್ರ ಮಧ್ಯದಲ್ಲಿ ಸಿಕ್ಕಿ ಹಾಕಿಕೊಂಡಿತ್ತು. ಈ ಬಗ್ಗೆ ಗಂಗೊಳ್ಳಿ ಕರಾವಳಿ ಕಾವಲು ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸಂದೀಪ್ ಜಿಎಸ್ ಅವರಿಗೆ ಮಾಹಿತಿ ಪಡೆದು ಸಮುದ್ರದಲ್ಲಿ ಪೆಟ್ರೋಲಿಂಗ್ ನಡೆಸುತ್ತಿದ್ದ ಕರಾವಳಿ ಕಾವಲು ಪೊಲೀಸ್ ಠಾಣೆಯ ಸಿಬ್ಬಂದಿಗೆ ಮಾಹಿತಿಯನ್ನು ನೀಡಿ ಸಮುದ್ರ ಮಧ್ಯದಲ್ಲಿ ಸಿಲುಕಿದ್ದ ದೋಣಿ ಹಾಗೂ ದೋಣಿಯಲ್ಲಿದ್ದ ನಾಲ್ವರು ಮೀನುಗಾರರನ್ನು ಸುರಕ್ಷಿತವಾಗಿ ದಡಕ್ಕೆ ತಲುಪಿಸಿದ್ದಾರೆ.
ದೋಣಿ ಗಂಗೊಳ್ಳಿ ಲೈಟ್ ಹೌಸ್ ನಿವಾಸಿ ದಿನೇಶ್ ಖಾರ್ವಿ ಎಂಬುವರಿಗೆ ಸೇರಿದ್ದಾಗಿದೆ. ದೋಣಿಯಲ್ಲಿ ಗಂಗೊಳ್ಳಿ ಖಾರ್ವಿಕೇರಿ ನಿವಾಸಿಗಳಾದ ಮಣಿಕಂಠ ಖಾರ್ವಿ, ನಾಗಪ್ಪ ಖಾರ್ವಿ, ಪಾಂಡುರಂಗ ಖಾರ್ವಿ ಮತ್ತು ಗಂಗೊಳ್ಳಿ ಬೇಲಿಕೇರಿ ನಿವಾಸಿ ಸಂತೋಷ್ ಖಾರ್ವಿ ಎಂಬುವರನ್ನು ರಕ್ಷಿಸಲಾಗಿದೆ.
ಕರಾವಳಿ ಕಾವಲು ಪೊಲೀಸ್ ಠಾಣೆಯ ಬೋಟಿನ ಕ್ಯಾಪ್ಟನ್ ದೀಪಕ್ ಕುಮಾರ್, ಹೆಚ್ ಸಿ ಗುರುರಾಜ್ ಮತ್ತು ಸಿಬ್ಬಂದಿ ಪ್ರಸಾದ್ ಶೆಟ್ಟಿ ಹಾಗೂ ಕಲಾಸಿ ಶೈಲೇಶ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.