ಉಡುಪಿ: ಆಂಧ್ರ ಪ್ರದೇಶದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದ ದಲಿತ ಯುವಕನ ಮೇಲಿನ ದೌರ್ಜನ್ಯ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲುಗು ಚಿತ್ರ ನಿರ್ಮಾಪಕ, ತೆಲುಗು ಬಿಗ್‌ಬಾಸ್ ಮೊದಲ ಆವೃತ್ತಿಯ ಸ್ಪರ್ಧಿ, ಆರೋಪಿ ನೂತನ್ ನಾಯ್ಡುನನ್ನು ಉಡುಪಿ ರೈಲ್ವೆ ನಿಲ್ದಾಣದಲ್ಲಿ ಸ್ಥಳೀಯ ಪೊಲೀಸರು ಬಂಧಿಸಿದ್ದಾರೆ.
ಆಂಧ್ರಪ್ರದೇಶ, ವಿಶಾಖಪಟ್ಟಣ ಪೊಲೀಸರಿಂದ ಶನಿವಾರ ಬೆಳಗ್ಗೆ ಖಚಿತ ಮಾಹಿತಿ ಪಡೆದ ಉಡುಪಿ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿ ಮಂಗಳೂರಿನಿಂದ ಮುಂಬೈಗೆ ಪರಾರಿಯಾಗಲು ಯತ್ನಿಸಿದ್ದರು ಎನ್ನಲಾಗ್ತಿದೆ. ಉಡುಪಿ ಮತ್ತು ಮಣಿಪಾಲ ಠಾಣೆ ಪಿಎಸ್‌ಐ ನೇತೃತ್ವದ ತಂಡದ ಪೊಲೀಸರು, ಆರೋಪಿಯನ್ನು ಸುತ್ತುವರಿದಾಗ ತನ್ನ ಬಳಿಯಿದ್ದ ಒಂದು ಮೊಬೈಲ್ ಅನ್ನು ಎಸೆಯಲು ಮುಂದಾಗಿದ್ದರು ಎಂದು ತಿಳಿದುಬಂದಿದೆ.
ಆರೋಪಿ ನೂತನ್ ಅವರಿಂದ ನಾಲ್ಕು ಮೊಬೈಲ್ ಫೋನ್‌ಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಆರೋಪಿಯನ್ನು ವಿಶಾಖಪಟ್ಟಣ ಪೊಲೀಸರು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿ ವಿಶಾಖಪಟ್ಟಣಕ್ಕೆ ಕರೆದೊಯ್ದಿದ್ದಾರೆ.