ಉಡುಪಿ: ಮುಖ್ಯಮಂತ್ರಿಗಳ ಹೆಸರಲ್ಲಿ ನಕಲಿ ಮೇಲ್ ಐಡಿ ಸೃಷ್ಟಿಸಿ, ಮಣಿಪಾಲದ ಮಾಹೆ ವಿಶ್ವವಿದ್ಯಾಲಯವನ್ನು ವಂಚಿಸಿದ ಬಗ್ಗೆ ಉಡುಪಿಯ ಸೆನ್ ಠಾಣೆಯಲ್ಲಿ ಪ್ರಕರಣವೊಂದು ದಾಖಲಾಗಿದೆ. ನವೆಂಬರ್ನಲ್ಲಿ ಕಾಲೇಜುಗಳ ಆರಂಭಕ್ಕೆ ಚಿಂತನೆ ನಡೆದಿರುವಾಗಲೇ ಈ ದುಷ್ಕೃತ್ಯ ನಡೆದಿದೆ.
ನವೆಂಬರ್ ಒಂದರಂದು 04: 48 ಗಂಟೆಗೆ ಯಾರೋ ಅಪರಿಚಿತ ವ್ಯಕ್ತಿಯು, cm@karnataka.gov.in ಎಂಬ ನಕಲಿ ಮೇಲ್ ಐ.ಡಿ.ಯನ್ನು ಸೃಷ್ಟಿಸಿ, ಅದರಲ್ಲಿ ಮುಖ್ಯಮಂತ್ರಿ ಅವರ ವಿಳಾಸ ನಮೂದಿಸಿ ಮುಖ್ಯಮಂತ್ರಿ ಕಚೇರಿಯಿಂದಲೇ ಮೇಲ್ ಕಳುಹಿಸಿದ ರೀತಿಯಲ್ಲಿ ಸಂದೇಶ ರವಾನಿಸಿದ್ದಾನೆ.
ಮಾಹೆ ವಿವಿಯ ರಿಜಿಸ್ಟಾರ್ ಡಾ. ನಾರಾಯಣ ಸಭಾಹಿತ್ ಅವರ ಹೆಸರಿಗೆ ಮೇಲ್ ಬಂದಿದ್ದು, ಕಾಲೇಜು ಮರು ಆರಂಭದ ಬಗ್ಗೆ ದೇಶ-ವಿದೇಶಗಳ ಪೋಷಕರಿಂದ ಅನೇಕ ದೂರುಗಳು ಬಂದಿದೆ. ಹಾಗಾಗಿ ನವೆಂಬರ್-ಡಿಸೆಂಬರ್ ತಿಂಗಳಲ್ಲಿ ಕಾಲೇಜು ಮರು ಆರಂಭ ಮಾಡಬಾರದು. ಕೊರೊನಾ ಭೀತಿ ಇನ್ನೂ ದೂರವಾಗದ ಕಾರಣ, ಕಾಲೇಜು ಮರು ಆರಂಭಕ್ಕೆ ಈ ಸಮಯ ಸೂಕ್ತವಲ್ಲ. ಮಾಹೆ ವಿವಿಯು 2021 ರ ಜನವರಿವರೆಗೆ ಯಾವುದೇ ತರಗತಿ ಆರಂಭಿಸದಂತೆ ಈ ಸುಳ್ಳು ಮೇಲ್ನಲ್ಲಿ ಆದೇಶಿಸಲಾಗಿತ್ತು.
ಮುಖ್ಯಮಂತ್ರಿಯವರ ಈ-ಮೇಲ್ ಐಡಿಯನ್ನು ಕದ್ದು, ಅದೇ ರೀತಿಯಾಗಿ ಸುಳ್ಳು ಈ-ಮೇಲ್ ಐಡಿಯನ್ನು ಅವರ ಹೆಸರಿನಲ್ಲಿ ಸೃಷ್ಟಿಸಲಾಗಿದೆ. ಈ-ಮೇಲ್ ಸಂದೇಶವನ್ನು ಮುಖ್ಯಮಂತ್ರಿಯವರೇ ಕಳುಹಿಸಿದ್ದಾಗಿ ಎನ್ನುವ ರೀತಿಯಲ್ಲಿ ಸಂಸ್ಥೆಗೆ ತಪ್ಪು ಮಾಹಿತಿಯನ್ನು ನೀಡಿ, ನಂಬಿಸಿ ವಂಚಿಸಿದ ಬಗ್ಗೆ ಸದ್ಯ ದೂರು ದಾಖಲಾಗಿದೆ.