ಉಡುಪಿ: ಸಾಧಿಸುವ ಛಲವೊಂದಿದ್ದರೆ ಸಾಧನೆಗೆ ಯಾವುದೂ ಅಡ್ಡಿಯಲ್ಲ. ಸಾಧನೆಗೆ ಒಂದೊಳ್ಳೆ ಮನಸ್ಸು, ದೃಢ ಸಂಕಲ್ಪ ಇರಬೇಕು, ಗುರಿ ತಲುಪುವ ಛಲ ಬೇಕು ಎಂಬ ಮಾತಿದೆ. ಇದಕ್ಕೆ ಉದಾಹರಣೆ ಎಂಬಂತೆ ಜಿಲ್ಲೆಯ ವಿಶೇಷ ಚೇತನ ಸಹೋದರರು ತಮ್ಮ ಪ್ರತಿಭೆಯಿಂದ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಜಿಲ್ಲೆಯ ಪಡುಬಿದ್ರೆಯ ಗಣೇಶ್ ಮತ್ತು ಸಹೋದರಿ ಸುಮಂಗಲ ಹುಟ್ಟಿನಿಂದಲೇ ವಿಶೇಷ ಚೇತನರು. ಅಣ್ಣ - ತಂಗಿಯದ್ದು ಕುಬ್ಜ ದೇಹ, ಎದ್ದು ನಿಲ್ಲಲೂ ಸಾಧ್ಯವಾಗದಿರುವ ದೇಹದ ಪರಿಸ್ಥಿತಿ, ದೇಹ ಸ್ವಲ್ಪ ಅಲ್ಲಾಡಿದರೂ ಮೂಳೆ ಮುರಿಯುವ ವಿಚಿತ್ರ ಕಾಯಿಲೆ ಇದೆ. ಆದರೆ, ಇವರಿಗೆ ಏನಾದರು ಸಾಧಿಸಬೇಕು, ಇತರರಂತೆ ನಾವೂ ಗುರುತಿಸಿಕೊಳ್ಳಬೇಕು ಎನ್ನುವ ಛಲ ಇತ್ತು. ಈ ಉತ್ಸಾಹವೇ ಇಬ್ಬರನ್ನೂ ಕಲಾವಿದರನ್ನಾಗಿ ಮಾಡಿದೆ.
ಪದವಿ ಶಿಕ್ಷಣ ಪಡೆದ ಗಣೇಶ್, ಸಾಮಾಜಿಕ ಜಾಲತಾಣಗಳನ್ನು ನೋಡಿ ಚಿತ್ರ ಬರೆಯುವುದನ್ನು ಕಲಿತಿದ್ದರು. ಸತತ ಪ್ರಯತ್ನ ಪಟ್ಟು ಗಣ್ಯರ ಪೇಂಟಿಂಗ್ ಮಾಡಿ, ಅವರಿಗೂ ನೀಡಿ ಪ್ರಶಂಸೆ ಗಿಟ್ಟಿಸಿಕೊಂಡಿದ್ದರು. ಅಣ್ಣನನ್ನು ನೋಡಿ ತಾನೂ ಏನಾದರೂ ಸಾಧಿಸಬೇಕು ಅಂದುಕೊಂಡ ಸಹೋದರಿ ಸುಮಂಗಲ, ಗೊಂಬೆ ತಯಾರಿಸುವುದನ್ನು ಕಲಿತುಕೊಂಡು, ತಾಜ್ ಮಹಲ್, ಎತ್ತಿನ ಗಾಡಿ ಮುಂತಾದ ಗೊಂಬೆಗಳನ್ನು ತಯಾರಿಸಿ ಎಲ್ಲರ ಗಮನ ಸೆಳೆದಿದ್ದಾರೆ.
ಈ ವಿಶೇಷ ಚೇತನ ಕಲಾವಿದರ ಕಲಾ ಪ್ರದರ್ಶನಕ್ಕೆ, ಯೋಗದ ಮೂಲಕ ವಿಶ್ವ ದಾಖಲೆ ಬರೆದ ತನುಶ್ರೀ ಪಿತ್ರೋಡಿಯವರ ಪೋಷಕರು ಆಯೋಜಿಸಿದ ಸ್ಪೂರ್ತಿ- 2020 ಕಾರ್ಯಕ್ರಮಲ್ಲಿ ವೇದಿಕೆ ಒದಗಿಸಿಕೊಡಲಾಗಿತ್ತು. ಕಾರ್ಯಕ್ರಮಕ್ಕೆ ಬಂದವರು ಇವರಿಬ್ಬರ ಕಲಾ ಪ್ರತಿಭೆ ನೋಡಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಜೊತೆಗೆ, ಇವರು ತಯಾರಿಸಿದ ವಸ್ತುಗಳನ್ನು ಖರೀದಿಸಿ ನೆರವಾಗಿದ್ದಾರೆ.