ಉಡುಪಿ : ಕೃಷ್ಣನೂರು ಉಡುಪಿಯಲ್ಲಿ ಅಯೋಧ್ಯ ರಾಮನ ಮಹೋತ್ಸವ ನಡೆಯುತ್ತಿದೆ. ಅಷ್ಟಮಠಗಳ ರಥಬೀದಿ ಈಗ ರಾಮ ಜಪದಲ್ಲಿ ಮಿಂದೇಳುತ್ತಿದೆ. ಮರ್ಯಾದ ಪುರುಷೋತ್ತಮ ಶ್ರೀರಾಮಚಂದ್ರ ದೇವರ ಜೀವನ ಕಥೆ ಹೇಳುವ ಗೊಂಬೆಗಳು ಭಕ್ತರ ಮನ ಸೆಳೆಯುತ್ತಿವೆ.
ಉಡುಪಿ ಕೃಷ್ಣ ದೇವರ ಆರಾಧನಾ ಕೇಂದ್ರವಾದರೂ ರಾಮದೇವರ ಬಗ್ಗೆ ಇಲ್ಲಿನ ಅಷ್ಟ ಮಠಗಳಿಗೆ ಎಲ್ಲಿಲ್ಲದ ಪ್ರೀತಿ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಬೇಕೆಂದು ನಿತ್ಯ ಜಪ ನಡೆಸಿದ ಧಾರ್ಮಿಕ ಕೇಂದ್ರಗಳಲ್ಲಿ ಉಡುಪಿಯ ಕೃಷ್ಣ ಮಠವು ಒಂದು. ಈಗ ಅಯೋಧ್ಯೆಯಲ್ಲಿ ರಾಮಮಂದಿರ ತಲೆಯೆತ್ತುತ್ತಿದ್ದರೆ ಇತ್ತ ಕೃಷ್ಣನೂರು ಉಡುಪಿಯಲ್ಲಿ ರಾಮದೇವರ ಗುಣಗಾನ ಮಾಡುವ ರಾಮೋತ್ಸವ ನಡೆಯುತ್ತಿದೆ.
ಕಲಾವಿದರ ಕುಂಚದಲ್ಲಿ ಅರಳಿದ ಸೀತಾಪಹರಣ : ಎರಡು ವಾರಗಳ ಕಾಲ ನಡೆಯುವ ಈ ಸರಳ ಧಾರ್ಮಿಕ ಸಮಾರಂಭದಲ್ಲಿ ಎಲ್ಲರ ಗಮನ ಸೆಳೆಯುತ್ತಿರುವುದು ರಾಮನ ಕಥೆ ಹೇಳುವ ಗೊಂಬೆಗಳು, ಧಾತು ಸಂಸ್ಥೆ ಬೆಂಗಳೂರು ಇದರ ಸುಮಾರು 4 ಸಾವಿರಕ್ಕೂ ಅಧಿಕ ಗೊಂಬೆಗಳನ್ನು ಆಕರ್ಷಕವಾಗಿ ಜೋಡಿಸಿ ರಾಮದೇವರ ಜೀವನಕಥೆಯನ್ನು ಇಲ್ಲಿ ಪ್ರಸ್ತುತಪಡಿಸಲಾಗಿದೆ.
ರಾಮನ ಹುಟ್ಟು ರಾಮದೇವರು ಯೌವನ ಕಾಲದಲ್ಲಿ ತೋರಿಸಿದ ಸಾಹಸ ಸೀತಾಪರಣ, ಅಯೋಧ್ಯಾ ತೊರೆದು ಅರಣ್ಯ ಸೇರುವ ರಾಮದೇವರ ಭಾವುಕ ಕ್ಷಣಗಳು ಸೇರಿ ಶ್ರಾವಣದ ಅಂತ್ಯದವರೆಗಿನ ಎಲ್ಲಾ ಕಥಾನಕಗಳು ಇಲ್ಲಿ ಗೊಂಬೆಯ ರೂಪದಲ್ಲಿ ಪ್ರಸ್ತುತಗೊಂಡಿವೆ. ಯಾವುದೇ ಪುರಾಣ ಪ್ರವಚನ ಹೇಳುವುದಕ್ಕಿಂತಲೂ ಹೆಚ್ಚು ಪರಿಣಾಮಕಾರಿಯಾಗಿ ಇಲ್ಲಿ ಗೊಂಬೆಗಳು ರಾಮನ ಕಥೆ ಹೇಳುತ್ತಿವೆ.
ಮರದ ಪೆಟ್ಟಿಗಯಲ್ಲಿ ರಾಮನ ಜೀವನ : ಮರದ ಪೆಟ್ಟಿಗೆಗಳ ಒಳಗೆ ಮಂದ ಬೆಳಕಿನ ಕೆಳಗೆ ಪುಟ್ಟ ಪುಟ್ಟ ಗೊಂಬೆಗಳನ್ನು ಇಲ್ಲಿ ಜೋಡಿಸಿಡಲಾಗಿದೆ. 4 ಹಂತಗಳಲ್ಲಿ ಈ ಗೊಂಬೆಗಳು ಪ್ರದರ್ಶನಕ್ಕೆ ಜೋಡಣೆಗೊಂಡಿವೆ. ಪ್ರತಿಯೊಬ್ಬ ಪ್ರೇಕ್ಷಕನಿಗೂ ರಾಮನ ಕಥೆ ಹೇಳಲು ಯುವಕರ ತಂಡ ಸಿದ್ಧವಾಗಿ ಕುಳಿತಿದೆ.
ನೋಡುಗರಿಗೆ ಮನಮುಟ್ಟುವ ರೀತಿ ಯುವಕರು ರಾಮದೇವರ ಕಥೆ ಹೇಳುತ್ತಿದ್ದಾರೆ. ಇದರಿಂದ ಯುವಕರಲ್ಲಿ ಪುರಾಣ ಪ್ರಜ್ಞೆಯು ಬೆಳೆಯುವುದಕ್ಕೆ ಸಾಧ್ಯವಾಗಿದೆ. ಇದೇ ವೇಳೆ ಅದಮಾರು ಮಠದ ಆಶ್ರಯದಲ್ಲಿ ರಾಷ್ಟ್ರೀಯ ಮಟ್ಟದ ಕಲಾವಿದರ ತರಬೇತಿ ಶಿಬಿರವು ನಡೆಯುತ್ತಿದೆ.
ದೇಶದ ನಾನಾ ಭಾಗಗಳಿಂದ ಬಂದಿರುವ ಕಲಾವಿದರು ಇಲ್ಲಿ ಕಾರ್ಯಾಗಾರ ನಡೆಸುತ್ತಿದ್ದಾರೆ. ಸದ್ಯ ಅಷ್ಟಮಠಗಳ ಉಡುಪಿ ರಾಮಕೃಷ್ಣ ದೇವರ ಜಪದಲ್ಲಿ ತಲ್ಲೀನವಾಗಿದೆ. ಕಲಾ ಆರಾಧನೆಯ ಮೂಲಕ ದೇವರ ಪೂಜೆ ನಡೆಸುವುದು ಅದಮಾರು ಪರ್ಯಾಯ ಮಠದ ಆಶಯವಾಗಿದೆ.