ಉಡುಪಿ: ನಕಲಿ ದಾಖಲೆ ಸೃಷ್ಟಿಸಿ ಬ್ಯಾಂಕ್ಗೆ ವಂಚಿಸಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ವೈದ್ಯೆ ಸಹಿತ ಇಬ್ಬರನ್ನು ಕಾಪು ಪೊಲೀಸರು ಬಂಧಿಸಿದ್ದಾರೆ.
ಉಪ್ಪೂರು ಸಾಲ್ಮರ ನಿವಾಸಿ ಡಾ. ರೆನಿಟ್ ಸೋನಿಯಾ ಡಿಸೋಜ ಹಾಗೂ ಸಾಲಿಗ್ರಾಮ ಚಿತ್ರಪಾಡಿ ನಿವಾಸಿ ವಿಜಯ ಕೊಠಾರಿ (43) ಬಂಧಿತ ಆರೋಪಿಗಳು. ಡಾ. ರೆನೆಟ್ ಸೋನಿಯಾ ಡಿಸೋಜ ತಾನು ಮಣಿಪಾಲದ ಮಾಹೆಯಲ್ಲಿ ವೈದ್ಯೆ ಹಾಗೂ ಪ್ರೊಫೆಸರ್ ಆಗಿ ಕೆಲಸ ಮಾಡುತ್ತಿದ್ದು, ಮಾಸಿಕ ವೇತನ 2.66 ಲಕ್ಷ ರೂ. ಎಂದು ಹೇಳಿ ಕಾರು ಖರೀದಿಗೆ ಸಾಲ ಕೊಡುವಂತೆ ಕಾಪು ಮೂಡುಬೆಟ್ಟಿನ ಬ್ಯಾಂಕ್ ಆಫ್ ಬರೋಡಾ ಶಾಖೆಯ ಮ್ಯಾನೇಜರ್ ಅಲ್ವಿನಾ ಡಿಸೋಜ ಅವರಿಗೆ ಮನವಿ ಮಾಡಿದ್ದರು.
ಸಾಲದ ಅರ್ಜಿಯೊಂದಿಗೆ ಸಲ್ಲಿಸಿದ ವಿವರಗಳು ಹಾಗೂ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಸಂಸ್ಥೆಯ ವೇತನ ಸ್ಲಿಪ್ಗಳನ್ನು ಬ್ಯಾಂಕ್ನ ಸಿಬ್ಬಂದಿ ಪರಿಶೀಲಿಸಿದಾಗ ಡಾ. ರೆನಿಟ್ ಮಾಹೆಯಲ್ಲಿ ಉದ್ಯೋಗದಲ್ಲಿ ಇಲ್ಲ ಎಂಬುವುದನ್ನು ಮಾಹೆ ಸಂಸ್ಥೆ ಸ್ಪಷ್ಟಪಡಿಸಿದೆ. ನಕಲಿ ದಾಖಲೆ ಸೃಷ್ಟಿಸಿ ಬ್ಯಾಂಕ್ಗೆ ವಂಚಿಸಲು ಯತ್ನಿಸಿದ ಬಗ್ಗೆ ಕಾಪು ಠಾಣೆಯಲ್ಲಿ ಬ್ಯಾಂಕ್ ವ್ಯವಸ್ಥಾಪಕರು ದೂರು ಸಲ್ಲಿಸಿದ್ದರು.
ದೂರು ಸ್ವೀಕರಿಸಿದ ಕಾಪು ಪೊಲೀಸರು ಡಾ. ರೆನಿಟ್ ಮತ್ತು ನಕಲಿ ದಾಖಲಾತಿ ಸೃಷ್ಟಿಸಿದ ವಿಜಯ ಕೊಠಾರಿಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ ಲ್ಯಾಪ್ಟಾಪ್ ವಶಪಡಿಸಿಕೊಳ್ಳಲಾಗಿದೆ.