ಉಡುಪಿ: ಕೊರೊನಾ ಜನರಲ್ಲಿ ಒಂದೆಡೆ ಆತಂಕ ಮೂಡಿಸಿದ್ದರೆ, ಮತ್ತೊಂದೆಡೆ ಆರೋಗ್ಯದ ಅರಿವುವನ್ನೂ ಸಹ ಉಂಟುಮಾಡಿದೆ. ಈ ಮೊದಲು ಆರೋಗ್ಯ ವಿಚಾರದಲ್ಲಿ ತಾತ್ಸಾರ ಮಾಡುತ್ತಿದ್ದ ಜನರು, ಈಗ ಅದಕ್ಕೆ ಹೆಚ್ಚು ಗಮನ ಕೊಡುತ್ತಿದ್ದಾರೆ. ಅದಕ್ಕೆ ಕಾರಣ ಮಹಾಮಾರಿ ಕೋವಿಡ್-19. ಇದು ಮಾನವನ ಆಲೋಚನೆಗಳನ್ನೇ ಬದಲಾಯಿಸಿದೆ.
ಆರಂಭದಲ್ಲಿ ಒಂದೂ ಪ್ರಕರಣ ದಾಖಲಾಗದ ಜಿಲ್ಲೆಯಲ್ಲಿ ಮುಂಬೈ ನಂಟು ಮತ್ತು ಅನ್ಲಾಕ್ ನಂತರ ಪ್ರಕರಣಗಳ ಸಂಖ್ಯೆ ದಿನಕಳೆದಂತೆ ಹೆಚ್ಚಾದವು. ಇದರಿಂದ ಸೋಂಕಿತರ ಸಂಖ್ಯೆ 10 ಸಾವಿರ (10,236) ಗಡಿ ದಾಟಿದೆ. ಅಲ್ಲದೆ, ಈವರೆಗೆ 7,435 ಮಂದಿ ಬಿಡುಗಡೆಗೊಂಡಿದ್ದು, 88 ಮಂದಿ ಮೃತಪಟ್ಟಿದ್ದಾರೆ. 2,713 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಜಿಲ್ಲಾ ಸರ್ಜನ್ ಮಧುಸೂದನ್ ಅವರು ಹೇಳುವಂತೆ, ಕೋವಿಡ್ ಬರುವುದಕ್ಕೂ ಮುನ್ನ ಇಲ್ಲಿ ಆರೋಗ್ಯದ ಬಗ್ಗೆ ಜಾಗೃತಿ ಕಡಿಮೆ ಇತ್ತು. ಕಂಡ ಕಂಡಲ್ಲಿ ಕಸದ ರಾಶಿ ಇರುತ್ತಿತ್ತು. ಆದರೆ, ಕೋವಿಡ್-19 ಉಲ್ಬಣಗೊಂಡ ನಂತರ ಉಗುಳುವುದಕ್ಕೂ ಹಿಂದೆ-ಮುಂದೆ ನೋಡುತ್ತಿದ್ಆರೆ. ಮನೆ ಬಿಟ್ಟು ಬರಲು ಸಹ ಭಯಪಡುತ್ತಿದ್ದಾರೆ.
ಮಾಸ್ಕ್, ಸಾಮಾಜಿಕ ಅಂತರ ಹೀಗೆ ಅನೇಕ ಹೊಸ ಪದಗಳು ಜನರನ್ನು ಆರೋಗ್ಯವಂತರನ್ನಾಗಿ ಮಾಡಿವೆ. ಜಿಲ್ಲಾಸ್ಪತ್ರೆ ಅಂಕಿ-ಅಂಶವನ್ನು ಗಮಿಸಿದರೆ ಕೊರೊನಾಗೂ ಮೊದಲು ದಿನಕ್ಕೆ ಆಸ್ಪತ್ರೆಗೆ ಬರುತ್ತಿದ್ದ ಸಾವಿರಾರು ಹೊರ ರೋಗಿಗಳ ಸಂಖ್ಯೆ ಈಗ 200ಕ್ಕೆ, ಒಳರೋಗಿಗಳ ಸಂಖ್ಯೆ ದಿನಕ್ಕೆ 200ರಿಂದ 80ಕ್ಕೆ ಇಳಿಮುಖವಾಗಿದೆ ಎಂದು ಮಧುಸೂದನ್ ವಿವರಿಸಿದರು.