ಉಡುಪಿ: ಕಳೆದ 13 ವರ್ಷಗಳಿಂದ ಪರಸ್ಪರ ಬೇರ್ಪಟ್ಟಿದ್ದ ದಂಪತಿಯನ್ನು ಉಡುಪಿಯಲ್ಲಿ ನಡೆದ ಬೃಹತ್ ಲೋಕ್ ಅದಾಲತ್ ಮತ್ತೆ ಒಂದು ಮಾಡಿದೆ. ನ್ಯಾಯಾಧೀಶರು ಮತ್ತು ವಕೀಲರ ಸತತ ಪ್ರಯತ್ನದಿಂದಾಗಿ ದಂಪತಿ ವೈಮನಸ್ಸು ಮರೆತು ಒಂದಾಗಿದ್ದಾರೆ.
ಬ್ರಹ್ಮಾವರದ ಹರೀಶ್ ಮತ್ತು ಮಂಗಳೂರಿನ ಗೀತಾ (ಇಬ್ಬರ ಹೆಸರೂ ಬದಲಾಯಿಸಲಾಗಿದೆ) 2003ರ ಜೂ.27ರಂದು ಮಂಗಳೂರಿನಲ್ಲಿ ಮದುವೆಯಾಗಿದ್ದರು. ಆದರೆ, ಗಂಡ ತನ್ನನ್ನು ಮತ್ತು ಮಗಳನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ. ಮಗಳ ಮೇಲೆ ಪ್ರೀತಿ ತೋರಿಸುತ್ತಿಲ್ಲವೆಂದು ಕಳೆದ 13 ವರ್ಷಗಳಿಂದ ಗೀತಾ ದೂರವಾಗಿದ್ದರು.
ಗಂಡನ ಮನೆ ತೊರೆದು ತನ್ನ ಮಗಳೊಂದಿಗೆ ಪ್ರತ್ಯೇಕವಾಗಿ ಉಡುಪಿಗೆ ಬಂದು ಗೀತಾ ವಾಸಿಸುತ್ತಿದ್ದರು. ಪತಿ ಮತ್ತು ಪತ್ನಿಯನ್ನು ಒಂದು ಮಾಡಲು ಹಲವಾರು ಬಾರಿ ರಾಜೀ ಪಂಚಾಯಿತಿ ನಡೆದರೂ ಫಲಕಾರಿಯಾಗಿರಲಿಲ್ಲ. ಶನಿವಾರ ನಡೆದ ಲೋಕ್ ಅದಾಲತ್ನಲ್ಲಿ ನ್ಯಾಯಾಧೀಶರು ಮತ್ತು ವಕೀಲರ ಸತತ ಪ್ರಯತ್ನದಿಂದಾಗಿ ಈ ಪ್ರಕರಣ ಇತ್ಯರ್ಥಗೊಂಡಿದ್ದು, ದಂಪತಿ ಒಂದಾಗಿದ್ದಾರೆ.
ಸಾವಿರಾರು ಪ್ರಕರಣಗಳು ಇತ್ಯರ್ಥ: ಉಡುಪಿ ನ್ಯಾಯಾಲಯದ ಸಂಕೀರ್ಣದಲ್ಲಿ ಹಮ್ಮಿಕೊಂಡಿದ್ದ ಲೋಕ್ ಅದಾಲತ್ನಲ್ಲಿ ನ್ಯಾ.ಶಾಂತವೀರ ಶಿವಪ್ಪ, ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ದಿನೇಶ್ ಹೆಗ್ಡೆ, ನ್ಯಾ. ಎಸ್.ಶರ್ಮಿಳಾ, ವಕೀಲರ ಸಂಘದ ಅಧ್ಯಕ್ಷ ಬಿ.ನಾಗರಾಜ್, ಕಾರ್ಯದರ್ಶಿ ರೊನಾಲ್ಡ್ ಪ್ರವೀಣ್ ಕುಮಾರ್ ಮತ್ತು ವಕೀಲರು ಪಾಲ್ಗೊಂಡಿದ್ದರು.
ಈ ಲೋಕ್ ಅದಾಲತ್ನಲ್ಲಿ ಸಾವಿರಾರು ಪ್ರಕರಣಗಳು ಇತ್ಯರ್ಥಗೊಂಡವು. ಹಣಕಾಸು ಸಮಸ್ಯೆ, ಕೌಟುಂಬಿಕ ಸಮಸ್ಯೆ, ಜಾಗದ ತಕರಾರು, ದಂಪತಿ ನಡುವಿನ ಕಲಹ, ಅಣ್ಣ ತಮ್ಮಂದಿರ ಜಗಳ, ಆಸ್ತಿ ಹಂಚಿಕೆ ಪ್ರಕರಣ ಸೇರಿದಂತೆ ಬಹುತೇಕ ಪ್ರಕರಣಗಳನ್ನು ನ್ಯಾಯಾಧೀಶರು ಮತ್ತು ವಕೀಲರು ಮಧ್ಯಸ್ಥಿಕೆ ವಹಿಸಿ ಇತ್ಯರ್ಥಪಡಿಸಿದರು. ತಮ್ಮ ಸಮಸ್ಯೆ ಇತ್ಯರ್ಥಗೊಂಡಿದ್ದಕ್ಕೆ ಕಕ್ಷಿದಾರರು ಖುಷಿ ಪಟ್ಟರು.
ಇದನ್ನೂ ಓದಿ: ಧಾರವಾಡ: ವಿಚ್ಛೇದನ ಕೋರಿ ಬಂದು ಮತ್ತೆ ಒಂದಾಗಿ ನಡೆದ 17 ದಂಪತಿಗಳು