ಉಡುಪಿ: ಕರ್ನಾಟಕದ ಪತ್ರಕರ್ತರು ಮತ್ತು ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಯನ್ನು ರಾಜ್ಯ ಸರ್ಕಾರ ಕೋವಿಡ್ ಫ್ರಂಟ್ ಲೈನ್ ವಾರಿಯರ್ಸ್ ಎಂಬುದಾಗಿ ಘೋಷಿಸಿದೆ. ಈ ಹಿನ್ನೆಲೆ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಿಗೆ ಕೋವಿಶೀಲ್ಡ್ ಲಸಿಕೆ ನೀಡಯಿತು.
ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಉಡುಪಿ ಜಿಲ್ಲೆಯ ಪತ್ರಕರ್ತರಿಗೆ ಕೋವಿಶೀಲ್ಡ್ ಮೊದಲ ಡೋಸ್ ನೀಡುವ ಲಸಿಕೆ ಅಭಿಯಾನ ಬುಧವಾರ ನಡೆಯಿತು. ಉಡುಪಿಯ ಬ್ರಹ್ಮಗಿರಿ ಪ್ರೆಸ್ ಕ್ಲಬ್ ಸಮೀಪದ ಐಎಂಎ ಭವನದಲ್ಲಿ ಉಚಿತ ಲಸಿಕೆ ನೀಡುವ ಕಾರ್ಯಕ್ಕೆ ಬೆಳಗ್ಗೆ ಚಾಲನೆ ನೀಡಲಾಯಿತು. ಉಡುಪಿ ಡಿಹೆಚ್ಒ ಡಾ. ಸುಧೀರ್ ಚಂದ್ರಚೂಡ, ಲಸಿಕಾ ನೋಡಲ್ ಅಧಿಕಾರಿ ಡಾ. ಎಂ.ಜಿ.ರಾಮ, ಅಭಿಯಾನ ಸಂದರ್ಭದಲ್ಲಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಉಡುಪಿ ನಗರ, ಕಾರ್ಕಳ, ಕುಂದಾಪುರ, ಬ್ರಹ್ಮಾವರ, ಹೆಬ್ರಿ, ಕಾಪು ಸೇರಿದಂತೆ ಜಿಲ್ಲೆಯ 128 ಜನ ಪತ್ರಕರ್ತರು ಈ ಲಸಿಕೆ ಅಭಿಯಾನದಲ್ಲಿ ಭಾಗವಹಿಸಿ ಲಸಿಕೆ ಪಡೆದುಕೊಂಡರು. ಈಗಾಗಲೇ ಕೋವಿಶೀಲ್ಡ್ ಮೊದಲ ಡೋಸ್ ಪಡೆದು ಅವಧಿ ಮೀರಿದವರಿಗೂ 2ನೇ ಡೋಸ್ ಪಡೆಯಲು ಇಲ್ಲಿ ಅವಕಾಶ ಕಲ್ಪಿಸಲಾಯಿತು.
ಉಡುಪಿ ಜಿಲ್ಲಾಡಳಿತ ಆರೋಗ್ಯ ಇಲಾಖೆ ಮತ್ತು ಲಸಿಕಾ ಅಭಿಯಾನಕ್ಕೆ ಸಹಕರಿಸಿದ ಐಎಂಎ ಅಧ್ಯಕ್ಷರು ಸದಸ್ಯರಿಗೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು, ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ ಕೃತಜ್ಞತೆ ಸಲ್ಲಿಸಿದ್ದಾರೆ.