ಉಡುಪಿ: ಇಂದು ಜಿಲ್ಲೆಯಲ್ಲಿ 40 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಎಸ್ಎಸ್ಎಲ್ಸಿ ವಿದ್ಯಾರ್ಥಿನಿಯೊಬ್ಬಳಿಗೆ ಸೋಂಕು ತಗಲಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಮಾಹಿತಿ ನೀಡಿದ್ದಾರೆ.
ಮುಂಬೈನಿಂದ ಬಂದ 15 , ಬೆಂಗಳೂರಿಂದ ಬಂದ 2 , ಹಾಗೂ ಬಾಗಲಕೋಟೆಯಿಂದ ಬಂದ ಒಬ್ಬ ವ್ಯಕ್ತಿಗೆ ಪಾಸಿಟಿವ್ ಬಂದಿದ್ದು, 16 ಪಾಸಿಟಿವ್ ಪ್ರಕರಣ ಕೋವಿಡ್ ರೋಗಿಗಳ ಸಂಪರ್ಕದಿಂದ ಬಂದಿವೆ. ಇನ್ನು ಆರು ಮಂದಿ ಕೊರೊನಾ ವಾರಿಯರ್ಸ್ಗೂ ಸೋಂಕು ತಗುಲಿದೆ ಎಂದು ತಿಳಿಸಿದರು.
ಇನ್ನು ಎಸ್ಎಸ್ಎಲ್ಸಿ ವಿದ್ಯಾರ್ಥಿನಿ ನಿನ್ನೆ ಪರೀಕ್ಷೆಗೆ ಹಾಜರಾಗಿದ್ದಳು. ಅವಳ ಮನೆಯ ಇಬ್ಬರಿಗೆ ನಿನ್ನೆ ಪಾಸಿಟಿವ್ ಬಂದಿದ್ದು, ವಿದ್ಯಾರ್ಥಿನಿಗೆ ಇವತ್ತು ಪಾಸಿಟಿವ್ ಬಂದಿದೆ. ಇದರಿಂದ ವಿದ್ಯಾರ್ಥಿನಿ ಮುಂದಿನ ಪರೀಕ್ಷೆಗೆ ಹಾಜರಾಗುವುದಿಲ್ಲ. ಮರು ಪರೀಕ್ಷೆಯ ಅವಧಿಯಲ್ಲಿ ವಿದ್ಯಾರ್ಥಿನಿ ಉಳಿದ ಪೇಪರ್ ಬರೆಯುತ್ತಾಳೆ. ಆಕೆ ಪರೀಕ್ಷೆ ಬರೆದ ಕೊಠಡಿಯನ್ನು ಸ್ಯಾನಿಟೈಸ್ ಮಾಡಿದ್ದು, ಮುಂದೆ ಆ ಕೊಠಡಿಯನ್ನು ಪರೀಕ್ಷೆಗೆ ಬಳಸುವುದಿಲ್ಲ ಎಂದು ತಿಳಿಸಿದರು.
ಹೆಬ್ರಿಯಲ್ಲಿ ಆರು ಮಂದಿ ಆರೋಗ್ಯ ಸಿಬ್ಬಂದಿಗೆ ಸೋಂಕು: ಇನ್ನು ಹೆಬ್ರಿಯಲ್ಲಿ ಆರು ಮಂದಿ ಆರೋಗ್ಯ ಸಿಬ್ಬಂದಿಗೆ ಸೋಂಕು ತಗುಲಿದ್ದು, ಹೆಬ್ರಿಯ ಸಮುದಾಯ ಆರೋಗ್ಯ ಕೇಂದ್ರದ ವೈದ್ಯ ಮತ್ತು ಇತರ ಸಿಬ್ಬಂದಿ ಎಂದು ಗುರುತಿಸಲಾಗಿದೆ. ಮಂಗಳೂರಿಗೆ ತೆರಳಿ ಟ್ರಾವೆಲ್ ಹಿಸ್ಟರಿಯನ್ನು ಬಚ್ಚಿಟ್ಟಿದ್ದ ಸಹೋದರರಿಂದ, ನಾಲ್ವರಿಗೆ ಸೋಂಕು ತಗುಲಿದೆ ಎಂದು ಹೇಳಲಾಗಿದೆ.
ಕೇರಳ ಪ್ರವಾಸ ಮಾಡಿ ಬಂದಿದ್ದ ವ್ಯಕ್ತಿಯಿಂದ ಹತ್ತು ಮಂದಿಗೆ ಸೋಂಕು ತಗುಲಿದ್ದು, ಮಹಾರಾಷ್ಟ್ರ, ಬೆಂಗಳೂರು, ಬಾಗಲಕೋಟೆಯಿಂದ ಬಂದವರಿಗೂ ಕೂಡಾ ಸೋಂಕು ತಗುಲಿದೆ ಎಂದು ಡಿಎಚ್ಒ ಡಾ. ಸುಧೀರ್ ಚಂದ್ರ ಸೂಡ ಮಾಹಿತಿ ನೀಡಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,179 ಕ್ಕೆ ಏರಿಕೆಯಾಗಿದ್ದು, ಇಲ್ಲಿಯವರೆಗೆ 1,053 ಜನರು ಗುಣಮುಖರಾಗಿದ್ದಾರೆ. ಒಟ್ಟು 126 ಸಕ್ರಿಯ ಪ್ರಕರಣಗಳಿವೆ.