ಉಡುಪಿ: ಕೊಲ್ಲೂರು ಮೂಕಾಂಬಿಕಾ ದೇವಿ ದೇವಸ್ಥಾನದ ವಾರ್ಷಿಕ ರಥೋತ್ಸವಕ್ಕೆ ಕರೊನಾ ವೈರಸ್ ಅಡ್ಡಿಯಾಗಿದೆ. ಹೌದು, ಕರ್ನಾಟಕದಲ್ಲಿ ಕರೊನಾ ಹೈ ಅಲರ್ಟ್ ಇರುವ ಪರಿಣಾಮ ಈ ಬಾರಿ ಅದ್ಧೂರಿ ರಥೋತ್ಸವ ನಡೆಯಲಿಲ್ಲ.
ಸಾಂಪ್ರದಾಯಿಕ ಉತ್ಸವ ಮತ್ತು ರಥಾರೋಹಣ ನಡೆಸಿ ಈ ಬಾರಿ ವಾರ್ಷಿಕ ಜಾತ್ರೆಯನ್ನು ಮುಗಿಸಲಾಯ್ತು. ಜಿಲ್ಲೆಯ ಬೈಂದೂರು ತಾಲೂಕಿನಲ್ಲಿರುವ ಮೂಕಾಂಬಿಕೆಯ ಕ್ಷೇತ್ರ ದಕ್ಷಿಣ ಭಾರತದ ದೇವಿ ದೇವಸ್ಥಾನಗಳಲ್ಲಿ ಬಹಳ ಪ್ರಸಿದ್ಧಿ ಕ್ಷೇತ್ರ. ಮೂಕಾಂಬಿಕೆಯ ವಾರ್ಷಿಕ ರಥೋತ್ಸವಕ್ಕೆ ಸಾವಿರಾರು ಮಂದಿ ಸ್ಥಳೀಯ, ರಾಜ್ಯದ ಬೇರೆ-ಬೇರೆ ಭಾಗದ ಮತ್ತು ಹೊರ ರಾಜ್ಯದ ಭಕ್ತರು ಸೇರುತ್ತಾರೆ. ರಾಜ್ಯದಲ್ಲಿ ಕೊರೊನಾ ಎಮರ್ಜೆನ್ಸಿ ಇರೋದ್ರಿಂದ ಸರಳವಾಗಿ ದೇವಿಯ ಉತ್ಸವ ನಡೆಸಲು ಜಿಲ್ಲಾಧಿಕಾರಿ ಸೂಚಿಸಿದ್ದು, ಅದರಂತೆ ನಿನ್ನೆ ಆರಂಭದಲ್ಲಿ ದೇಗುಲದ ಒಳ ಸುತ್ತುಪೌಳಿಯಲ್ಲಿ ಬಲಿ ಉತ್ಸವ, ನೆರವೇರಿಸಲಾಯ್ತು.
ಈ ಕುರಿತು ದೇವಸ್ಥಾನದ ಅರ್ಚಕರು ಪ್ರತಿಕ್ರಿಯಿಸಿ, ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು, ಸುತ್ತಮುತ್ತಲಿನ ಮನೆಯವರು ಸಾಂಪ್ರದಾಯಿಕ ಉತ್ಸವದಲ್ಲಿ ಪಾಲ್ಗೊಂಡಿದ್ದಾರೆ. ದೇವಸ್ಥಾನಕ್ಕೆ ಎಂದಿನಂತೆ ಎಲ್ಲರಿಗೂ ಪ್ರವೇಶ ಇರಲಿಲ್ಲ, ಸರ್ಕಾರದ ಸೂಚನೆಯಂತೆ ಕಡಿಮೆ ಜನ ಧಾರ್ಮಿಕ ವಿಧಿ-ವಿಧಾನದಲ್ಲಿ ಪಾಲ್ಗೊಂಡರು. ಉತ್ಸವ ಮೂರ್ತಿಯನ್ನು ರಥಾರೋಹಣ ಮಾಡಿ ಆರತಿಯೆತ್ತಿ ಪೂಜೆ ಸಲ್ಲಿಸಲಾಯ್ತು ಎಂದರು. ಜೊತೆಗೆ, ದೇವಸ್ಥಾನದ ಸಿಬ್ಬಂದಿಗಳು-ಭಕ್ತರು ರಥವನ್ನು ಹತ್ತಿಪ್ಪತ್ತು ಮೀಟರ್ನಷ್ಟು ದೂರ ಎಳೆದು ಸಾಂಪ್ರದಾಯಕ್ಕೆ ಚ್ಯುತಿ ಬಾರದಂತೆ ಉತ್ಸವ ನೆರವೇರಿಸಿದರು. ಭಕ್ತರು ಮನೆಯಲ್ಲೇ ಇದ್ದು, ಪ್ರಾರ್ಥನೆ ಮಾಡಿ ಕಂಟಕಗಳು ನಿವಾರಣೆಯಾದ ಮೇಲೆ ದೇವಸ್ಥಾನ ಪೂಜೆ, ಉತ್ಸವದಲ್ಲಿ ಪಾಲ್ಗೊಳ್ಳಿ ಎಂದು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ವಿನಂತಿಸಿದೆ ಎಂದು ಮಾಹಿತಿ ಹಂಚಿಕೊಂಡರು.
ವ್ಯವಸ್ಥಾಪನಾ ಮಂಡಳಿ ಅಧ್ಯಕ್ಷ ಶೆಟ್ಟಿ ಮಾತನಾಡಿ, ದೇವಸ್ಥಾನದ ಇತಿಹಾಸದಲ್ಲಿ ಹೀಗಾಗಿದ್ದಿಲ್ಲ ಎಂದು ತಿಳಿದಿದ್ದೇವೆ. ಸಂಪ್ರದಾಯಕ್ಕೆ ಅಪಚಾರ ಆಗದಂತೆ ನಾವು ಉತ್ಸವಾದಿ ಪ್ರಕ್ರಿಯೆ ಮಾಡಿದ್ದೇವೆ. ಭಕ್ತರ ಸಹಕಾರಕ್ಕೆ ಈಟಿವಿ ಭಾರತ್ ಮೂಲಕ ಧನ್ಯವಾದ ಅರ್ಪಿಸುತ್ತೇನೆ ಎಂದರು.