ಉಡುಪಿ : ಹಿಂದುಳಿದ ವರ್ಗಗಳ ಮೀಸಲಾತಿಯನ್ನು ರದ್ದುಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಆರೋಪಿಸಿ ಉಡುಪಿಯಲ್ಲಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಯಿತು.
ಇಲ್ಲಿನ ಅಜ್ಜರಕಾಡು ಹುತಾತ್ಮರ ಸ್ಮಾರಕದ ಎದುರು ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಈ ವೇಳೆ ಮಾತನಾಡಿದ ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಕೇಂದ್ರ ಸರ್ಕಾರ ದಿನನಿತ್ಯ ಒಂದಿಲ್ಲೊಂದು ರೀತಿಯ ವಿವಾದಿತ ಕಾನೂನು ತರುತ್ತಿದೆ. ಈ ಕಾನೂನುಗಳು ಜನರಿಗೆ ಉಪಯೋಗವಾಗುವ ಬದಲು ತೊಂದರೆಯನ್ನೇ ಕೊಡುತ್ತಿವೆ ಎಂದು ದೂರಿದರು.
ಪೌರತ್ವ ಕಾಯಿದೆ ಸಂವಿಧಾನ ವಿರೋಧಿಯಾಗಿದೆ. ಸರ್ಕಾರ ಮಂಡಿಸಿದ ಬಜೆಟ್‌ನಲ್ಲಿ ದೇಶದ 1% ಜನರಿಗೂ ಉಪಯೋಗವಿಲ್ಲ. ಹೀಗೆ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಅನುಕೂಲ ಮಾಡಿಕೊಡುವ ಬದಲಿಗೆ ಇರುವ ಅನುಕೂಲಗಳನ್ನು ಒಂದೊಂದಾಗಿ ಕೇಂದ್ರ ಸರ್ಕಾರ ಹಿಂಪಡೆಯುತ್ತಿದೆ. ಇದರ ವಿರುದ್ಧ ಜನರು ದನಿ ಎತ್ತಬೇಕಾದ ಕಾಲ ಬಂದಿದೆ. ಕಾಂಗ್ರೆಸ್ ಪಕ್ಷ ನಿರಂತರವಾಗಿ ಜನರ ಪರ ದನಿ ಎತ್ತುವ ಕೆಲಸ ಮಾಡಲಿದೆ ಎಂದರು.