ಉಡುಪಿ: ಹಿರಿಯ ಕಾಂಗ್ರೆಸ್ ಮುಖಂಡ ಆಸ್ಕರ್ ಫರ್ನಾಂಡಿಸ್ ನಿಧನ ಹೊಂದಿರುವುದು ಬೇಸರದ ಸಂಗತಿ. ಆದರೆ, ಅವರ ಕಾರ್ಯ ಎಲ್ಲರ ಮನಸ್ಸಿನಲ್ಲೂ ಅಚ್ಚಳಿಯದೇ ಉಳಿದಿದೆ. ಈಗಿನ ರಾಜಕಾರಣಿಗಳಿಗೆ ಆಸ್ಕರ್ ಫರ್ನಾಂಡಿಸ್ ಅನೇಕ ಕಾರಣಗಳಿಗೆ ಮಾದರಿಯಾಗುತ್ತಾರೆ.
ದಿನದ 24 ಗಂಟೆಯೂ ಕಾರ್ಯಕರ್ತರಿಗೆ ಲಭ್ಯ ಇರುತ್ತಿದ್ದ ಆಸ್ಕರ್ ಫರ್ನಾಂಡಿಸ್, ರಾಷ್ಟ್ರೀಯ ನಾಯಕನಾಗಿ ಬೆಳೆದರೂ ತವರೂರಲ್ಲಿ ಅಪ್ಪಟ ಮಣ್ಣಿನ ಮಗನಾಗಿದ್ದರು. ಹುಟ್ಟು ಕೃಷಿಕರಾದ ಆಸ್ಕರ್ ಲೀಲಾಜಾಲವಾಗಿ ತುಳು ಪಾಡ್ದನಗಳನ್ನು ಹಾಡುತ್ತಿದ್ದರು. ಸ್ಥಳೀಯ ಗಣೇಶೋತ್ಸವ ಸಮಿತಿಯ ಅಧ್ಯಕ್ಷರೂ ಆಗಿದ್ದರು.
ಇದನ್ನೂ ಓದಿ: ಆಸ್ಕರ್ ಫರ್ನಾಂಡಿಸ್ ಕುಟುಂಬಸ್ಥರಿಂದ ಅಂತಿಮ ದರ್ಶನ: ಸೆ.15ರಂದು ಸೈಂಟ್ ಪೆಟ್ರಿಕ್ ಚರ್ಚ್ನಲ್ಲಿ ಅಂತ್ಯಸಂಸ್ಕಾರ
ವಿಧಾನಸೌಧದಲ್ಲಿ ಕರಾವಳಿಯ ನಾಯಕರು ಯಕ್ಷಗಾನ ಪ್ರದರ್ಶಿಸಿದಾಗ ತಾವು ಕೂಡ ಬಣ್ಣಹಚ್ಚಿದ್ದರು. ಭರತನಾಟ್ಯ, ಕೂಚಿಪುಡಿ ನೃತ್ಯ ಪ್ರಕಾರಗಳಲ್ಲೂ ಇವರಿಗೆ ಅಪಾರ ಜ್ಞಾನವಿತ್ತು. ಯೋಗ ಮತ್ತು ಆಯುರ್ವೇದದ ಪ್ರತಿಪಾದಕರಾಗಿಯೂ ಆಸ್ಕರ್ ಫರ್ನಾಂಡಿಸ್ ಗಮನ ಸೆಳೆದಿದ್ದರು. ಮಕ್ಕಳ ಮೇಲೆ ಅತಿಯಾದ ಪ್ರೀತಿ ಹೊಂದಿದ್ದ ಆಸ್ಕರ್ ಫರ್ನಾಂಡಿಸ್, ಮಕ್ಕಳು ಸಿಕ್ಕರೆ ಮೌತ್ ಆರ್ಗನ್ ನುಡಿಸುವ ಮೂಲಕ ರಂಜಿಸುತ್ತಿದ್ದರು.