ಉಡುಪಿ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ 2 ಕೋಟಿ ವೆಚ್ಚದ ಶೌಚಾಲಯವನ್ನು ಉದ್ಘಾಟಿಸಿದ್ದಾರೆ.
ಉದ್ಘಾಟನೆ ನಂತರ ಮಾತನಾಡಿದ ಸಿಎಂ ಯಡಿಯೂರಪ್ಪ, ಸ್ವಚ್ಛ ಭಾರತ ಕಲ್ಪನೆಗೆ ಇದು ಮಾದರಿಯಾಗಿದೆ. ಯಾತ್ರಾರ್ಥಿಗಳು ಇದನ್ನು ಉಪಯೋಗ ಮಾಡಬೇಕು. ಸ್ವಚ್ಛತೆ ವಿಚಾರದಲ್ಲಿ ಜನರಿಗೆ ಅರಿವು ಬರಬೇಕು ಎಂದರು.
ಇನ್ನು ಮಂಗಳೂರು ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರಿಗೆ ಪರಿಹಾರ ಘೋಷಿಸಿ ವಾಪಾಸ್ ಪಡೆದದ್ದರ ಬಗ್ಗೆ ಮಾತನಾಡಿದ ಸಿಎಂ, ಸರ್ಕಾರ ತನಿಖೆ ನಂತರ ಪರಿಹಾರ ಕೊಡಬೇಕಿತ್ತು. ತನಿಖೆ ಮೊದಲು ಪರಿಹಾರ ಕೊಟ್ಟರೆ ಅಪರಾಧ ಆಗುತ್ತದೆ. ಆ ನಂತರ ನಮಗೆ ಮನವರಿಕೆ ಆಗಿದೆ. ಬೇರೆಯವರೆಲ್ಲ ಕೊಟ್ಟಿದ್ದಾರೆ ನಮ್ಮ ಅಭ್ಯಂತರ ಇಲ್ಲ. ತನಿಖೆಯಾದ ಮೇಲೆ ಪರಿಹಾರ ಘೊಷಣೆ ಮಾಡುತ್ತೇವೆ ಎಂದರು.
ಉಡುಪಿ ಕೃಷ್ಣ ಮಠಕ್ಕೆ ಭೇಟಿ ನೀಡಿದ ಯಡಿಯೂರಪ್ಪಗೆ ಪಲಿಮಾರು ಮಠದ ಸ್ವಾಮೀಜಿ ಸ್ವಾಗತಿಸಿದರು. ಕನಕ ನವಗ್ರಹ ಕಿಂಡಿ ಮೂಲಕ ಸಿಎಂ ಯಡಿಯೂರಪ್ಪ ಶ್ರೀಕೃಷ್ಣನ ದರ್ಶನ ಮಾಡಿದರು. ಸಿಎಂ ಆದ ನಂತರ ಮೊದಲ ಬಾರಿ ಕೃಷ್ಣ ಮಠಕ್ಕೆ ಭೇಟಿ ನೀಡಿ ಪರ್ಯಾಯ ಪಲಿಮಾರು ಸ್ವಾಮೀಜಿ ಜೊತೆ ಸಮಾಲೋಚನೆ ನಡೆಸಿದರು.