ಉಡುಪಿ: ಬ್ರಹ್ಮಾವರ ತಾಲೂಕಿನ ಹೊಸೂರು ಗ್ರಾಮದಲ್ಲಿ ಕಳೆದ ಭಾನುವಾರ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಗಳನ್ನು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗಳನ್ನು ಮಲ್ಪೆ ನಿವಾಸಿಗಳಾದ ಗೌತಮ್ (27), ಮನೋಜ್ ಭಂಡಾರಿ (30), ಧನುಷ್ (27), ಚೇತನ್ ಕುಮಾರ್ (24), ತಿಲಕ ರಾಜ್ (36) ಮತ್ತು ಸಿದ್ಧಾರ್ಥ (23) ಎಂದು ಗುರುತಿಸಲಾಗಿದೆ. ಇವರು ಕಳೆದ ಭಾನುವಾರ ಉದ್ದಳ್ಕ ನಿವಾಸಿ ನವೀನ್ ನಾಯ್ಕ ಎಂಬಾತನನ್ನು ಕೊಲೆ ಮಾಡಿ ತಲೆಮರೆಸಿಕೊಂಡಿದ್ದರು.
ಆರೋಪಿಗಳ ಬೆನ್ನತ್ತಿದ ಬ್ರಹ್ಮಾವರ ಪೊಲೀಸರು ಸೋಮವಾರ ಉಡುಪಿಯಲ್ಲಿ ಹಂತಕರಿರುವುದನ್ನು ಪತ್ತೆ ಹಚ್ಚಿದ್ದಾರೆ. ಬ್ರಹ್ಮಾವರ ಪೊಲೀಸ್ ವೃತ್ತ ನಿರೀಕ್ಷಕರಾದ ಅನಂತಪದ್ಮನಾಭ ಹಾಗೂ ಪಿ.ಎಸ್.ಐ ಗುರುನಾಥ ಬಿ ಹಾದಿಮನಿ, ಮಲ್ಪೆ ಪಿಎಸ್ಐ ತಿಮ್ಮೇಶ ಬಿ.ಎನ್ ಅವರ ವಿಶೇಷ ತಂಡ ಆರೋಪಿಗಳನ್ನು ಬಂಧಿಸಿ, ಬಂಧಿತರಿಂದ ಕೃತ್ಯಕ್ಕೆ ಬಳಸಲಾದ ಮಾರುತಿ ರಿಟ್ಜ್ ಕಾರನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.
ಏನಿದು ಪ್ರಕರಣ?
ಕೊಲೆಯಾದ ನವೀನ್ ನಾಯ್ಕ ಮನೆಯ ಹತ್ತಿರ ಸರಸ್ವತಿ ಎಂಬುವರ ಮನೆಗೆ ಆರೋಪಿ ಗೌತಮ್ ಬರುತ್ತಿದ್ದನು. ಇದನ್ನು ಪ್ರಶ್ನಿಸಿದ ನವೀನ್ ನಾಯ್ಕನಿಗೆ ಕೊಲೆ ಮಾಡುವುದಾಗಿ ಗೌತಮ್ ಜೀವ ಬೆದರಿಕೆ ಹಾಕಿದ್ದ ಎಂದು ದೂರಲಾಗಿತ್ತು. ಇದೇ ದ್ವೇಷದಲ್ಲಿ ಗೌತಮ್ ತನ್ನ ಸಹಚರರೊಂದಿಗೆ ನವೀನ್ ನಾಯ್ಕ ಮನೆಗೆ ನುಗ್ಗಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು.