ಉಡುಪಿ: ಇಲ್ಲಿನ ಮಲ್ಪೆ ಬೀಚ್ನಿಂದ ಮೀನುಗಾರಿಕೆಗೆ ತೆರಳಿದ್ದ ಶ್ರೀಲಕ್ಷ್ಮೀ ಹೆಸರಿನ ಡೀಪ್ ಸೀ ಬೋಟ್ ಮಹಾರಾಷ್ಟ್ರದಲ್ಲಿ ಸೆರೆಯಾಗಿದ್ದು, ಬೋಟ್ನಲ್ಲಿದ್ದ ಏಳು ಮಂದಿ ಮೀನುಗಾರರನ್ನು ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದಾರೆ.
ಶ್ರೀಲಕ್ಷ್ಮೀ ಬೋಟ್ನ ಕ್ಯಾಪ್ಟನ್ ರಾಮ ಭಟ್ಕಳ ಸೇರಿ ಏಳು ಮಂದಿ ಎರಡು ದಿನಗಳ ಹಿಂದೆ ಮಲ್ಪೆಯಿಂದ ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದರು. ಬೋಟ್ನಲ್ಲಿದ್ದ ಏಳು ಮಂದಿ ಉತ್ತರಕನ್ನಡ ಜಿಲ್ಲೆಯವರು ಎಂದು ತಿಳಿದುಬಂದಿದೆ. ಗೋವಾ ರಾಜ್ಯ ದಾಟಿ ಮಹಾರಾಷ್ಟ್ರ ತಲುಪಿದ್ದ ಬೋಟ್ ಮಾಲ್ವಾನ್ ಸಮುದ್ರ ತಲುಪುತ್ತಿದ್ದಂತೆ ಅಲ್ಲಿನ ಕೋಸ್ಟ್ ಗಾರ್ಡ್ ಪೊಲೀಸರು ಬೋಟ್ ಮತ್ತು ಮೀನುಗಾರರನ್ನು ವಶಕ್ಕೆ ಪಡೆದಿದ್ದಾರೆ. ಮಹಾರಾಷ್ಟ್ರದ ಸಮುದ್ರ ತೀರದಿಂದ ಬೋಟ್ 12 ನಾಟೇಕಲ್ ದೂರ ಹೊರಗಿತ್ತು. ಆದರೂ ಮಹರಾಷ್ಟ್ರದ ಮಾಲ್ವಾನ್ ಕೋಸ್ಟ್ ಗಾರ್ಡ್ ಪೊಲೀಸರಿಗೆ ಅಲ್ಲಿನ ಮೀನುಗಾರರು ದೂರು ನೀಡಿದ್ದರಿಂದ ಬಂಧನವಾಗಿದೆ ಎಂದು ಮಲ್ಪೆಯ ಮೀನುಗಾರರು ದೂರಿದ್ದಾರೆ.
ಮಹಾರಾಷ್ಟ್ರ ರಾಜ್ಯದ ಗಡಿಯಿಂದ ಹೊರಗೆ ಮೀನುಗಾರಿಕೆ ಮಾಡುತ್ತಿದ್ದ ಬೋಟನ್ನು ಮಾಲ್ವಾನ್ನ ಸ್ಥಳೀಯ ಮೀನುಗಾರರು ಅಡ್ಡಗಟ್ಟಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಆದರೆ ನಿಯಮದಂತೆ ಮೀನುಗಾರಿಕೆ ಮಾಡಿದ್ದರೂ ಅರೆಸ್ಟ್ ಮಾಡಿದ ಮಹಾರಾಷ್ಟ್ರ ಪೊಲೀಸರ ಕ್ರಮವನ್ನು ಉಡುಪಿ ಬೋಟ್ ಚಾಲಕರ ಸಂಘದ ಅಧ್ಯಕ್ಷ ರವಿ ಖಂಡಿಸಿದ್ದಾರೆ. ಅಷ್ಟೇ ಅಲ್ಲದೆ, ಕೂಡಲೇ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.