ಉಡುಪಿ: ಜಿಲ್ಲೆಯ ಹೆಬ್ರಿ ತಾಲೂಕಿನಲ್ಲಿ ಹನಿಟ್ರ್ಯಾಪ್ ಮೂಲಕ ಜ್ಯೋತಿಷಿಯನ್ನ ಬ್ಲ್ಯಾಕ್ಮೇಲ್ ಮಾಡಲು ಯತ್ನಿಸಿದ್ದ ಇಬ್ಬರನ್ನ ಹೆಬ್ರಿ ಪೊಲೀಸರು ಬಂಧಿಸಿದ್ದಾರೆ.
ರಮೇಶ್ ಭಟ್ ಎಂಬುವರು ಬ್ಲ್ಯಾಕ್ ಮೇಲ್ಗೆ ಒಳಗಾಗಿರುವ ಜ್ಯೋತಿಷಿ. ಹೆಬ್ರಿ ತಾಲೂಕು ಬೆಳಿಂಜೆ ಗ್ರಾಮದ ಸುಮಾ ಹಾಗೂ ಕಿರಣ್ ಬಂಧಿತ ಆರೋಪಿಗಳು. ಈ ದಂಪತಿ ಸುಮಾ ಎಂಬುವಳನ್ನು ಜ್ಯೋತಿಷಿ ರಮೇಶ್ ಬಳಿ ಕಳಿಸಿದ್ದರು. ಈಕೆ ಜ್ಯೋತಿಷಿ ಬಳಿ ತೆರಳಿ ಎದೆಯಲ್ಲಿ ಸರ್ಪಸುತ್ತು ಇದೆಯೆಂದು ಹೇಳಿದ್ದಳು. ಆಗ ಜ್ಯೋತಿಷಿ ರಮೇಶ್ ಮೈಮುಟ್ಟಿ ಪರೀಕ್ಷೆ ನಡೆಸಿದ ದೃಶ್ಯವನ್ನ ವ್ಯಾನಿಟಿ ಬ್ಯಾಗ್ನಲ್ಲಿದ್ದ ಮೊಬೈಲ್ನಲ್ಲಿ ಸೆರೆಹಿಡಿದಿದ್ದಳು. ಬಳಿಕ ಈ ವಿಡಿಯೋ ಜ್ಯೋತಿಷಿಗೆ ತೋರಿಸಿ 40 ಲಕ್ಷ ಹಣಕ್ಕೆ ಬೇಡಿಕೆಯಿಟ್ಟು ಬ್ಲ್ಯಾಕ್ಮೇಲ್ ಮಾಡಲು ಮುಂದಾಗಿದ್ದಳು ಎಂದು ಪೊಲೀಸರು ವಿವರಿಸಿದ್ದಾರೆ.
ಇದರಿಂದ ಆತಂಕಗೊಂಡ ಜ್ಯೋತಿಷಿ ರಮೇಶ್ ಭಟ್ ಅವರು ಹೆಬ್ರಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಕೂಡಲೇ ಸುಮಾ ಹಾಗೂ ಈಕೆಯ ಪತಿ ರಾಘವೇಂದ್ರನನ್ನ ವಿಚಾರಣೆ ನಡೆಸಿದಾಗ ಆರೋಪಿ ಸುಮಾ, ತನ್ನ ದೂರದ ಸಂಬಂಧಿ ಕಿರಣ್ ಹಾಗೂ ಆತನ ಪತ್ನಿ ಲಕ್ಷ್ಮೀ ಈ ಕೃತ್ಯವನ್ನು ತನ್ನಿಂದ ಮಾಡಿಸಿದ್ದಾರೆ ಎಂದು ಬಾಯ್ಬಿಟ್ಟಿದ್ದಾಳೆ ಪೊಲೀಸರು ಮಾಹಿತಿ ನೀಡಿದ್ದಾರೆ.
ಸದ್ಯ, ಸುಮಾ ಹಾಗೂ ಕಿರಣ್ನನ್ನ ಬಂಧಿಸಿದ್ದು, ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಮೊಬೈಲ್, ಚಾಕು, ಕತ್ತಿ ಹಾಗೂ ಹಣವನ್ನ ಹೆಬ್ರಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.