ಉಡುಪಿ: ದಂಪತಿ ಬೈಕ್ನಲ್ಲಿ ರಸ್ತೆ ದಾಟುವಾಗ ಬುಲೆಟ್ ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಇಲ್ಲಿನ ರಾಷ್ಟ್ರೀಯ ಹೆದ್ದಾರಿ 66ರ ಕುಂಭಾಸಿ ಆನೆಗುಡ್ಡೆ ಗಣಪತಿ ಮುಖಮಂಟಪದ ಎದುರು ನಿನ್ನೆ ತಡ ರಾತ್ರಿ ನಡೆದಿದೆ.
ಅಪಘಾತದಲ್ಲಿ ಸಾವನ್ನಪ್ಪಿದ ಮಹಿಳೆ ಹೇಮಾ(32), ಹಾಗೂ ಪತಿ ನಾಗರಾಜ್ ಕೋತ್ವಾಲ್(35) ತೀವ್ರ ಗಾಯಗೊಂಡಿದ್ದು, ದಂಪತಿ ಬೈಂದೂರು ಸಮೀಪದ ತೆಗ್ಗರ್ಸೆ ನಿವಾಸಿಗಳೆಂದು ತಿಳಿದು ಬಂದಿದೆ. ಸಾವನಪ್ಪಿರುವ ಹೇಮಾ ಉಡುಪಿ ಎಸ್ಪಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಪೊಲೀಸ್ ಸಿಬ್ಬಂದಿ ಎಂದು ಗುರುತಿಸಲಾಗಿದೆ. ಇನ್ನು ಪತಿ ಕುಂದಾಪುರ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿಯಲ್ಲಿ ಎರಡನೇ ದರ್ಜೆಯ ಸಹಾಯಕ (ಕ್ಲಾರ್ಕ್) ಎಂದು ಮೂಲಗಳು ತಿಳಿಸಿವೆ.
ಘಟನೆಯ ಹಿನ್ನಲೆ:
ನಾಗರಾಜ್ ಮತ್ತು ಅವರ ಪತ್ನಿ ಹೇಮಾ ಅರಣ್ಯಾಧಿಕಾರಿಯೊಬ್ಬರ ಬೀಳ್ಕೊಡುಗೆ ಪ್ರಯುಕ್ತ ಗಾಯತ್ರಿ ಹಾಲ್ನಲ್ಲಿ ನಡೆದ ಪಾರ್ಟಿ ಮುಗಿಸಿ ಬೈಕ್ ನಲ್ಲಿ ರಸ್ತೆ ದಾಟುತ್ತಿರುವಾಗ ಕುಂದಾಪುರ ಕಡೆಯಿಂದ ಉಡುಪಿ ಕಡೆಗೆ ಪ್ರಯಾಣಿಸುತ್ತಿದ್ದ ಬುಲೆಟ್ ಬೈಕ್ ಅತೀ ವೇಗವಾಗಿ ಬಂದು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬೈಕಿನಲ್ಲಿದ್ದ ಹೇಮಾ ರಸ್ತೆಗೆ ಅಪ್ಪಳಿಸಿದ ಪರಿಣಾಮ ತಲೆಗೆ ಗಂಭೀರ ಗಾಯಗಳಾಗಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ನಾಗರಾಜ್ ಕೊತ್ವಾಲ್ ತಲೆಗೂ ಗಂಭೀರ ಗಾಯಗಳಾಗಿದ್ದು, ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಡಿಕ್ಕಿ ಹೊಡೆದ ಬುಲೆಟ್ ಸವಾರ ಪರಾರಿಯಾಗಿದ್ದು, ಹುಡುಕಾಟ ನಡೆಸುತ್ತಿದ್ದಾರೆ.
ಉಡುಪಿ ಎಸ್ಪಿ ನಿಶಾ ಜೇಮ್ಸ್ ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಸೀಲಿಸಿದ್ದಾರೆ. ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.