ಉಡುಪಿ: ರಾಮಮಂದಿರದ ತೀರ್ಪು ಬಂದ ಬಳಿಕ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗ್ತಿದೆ.
ಶನಿವಾರ ಅಂದ್ರೆ ನವೆಂಬರ್ 9ಕ್ಕೆ ಸರಿಯಾಗಿ ಒಂದು ವರ್ಷದ ಹಿಂದೆ ಕುಂದಾಪುರ ತಾಲೂಕಿನ ಬೀಜಾಡಿ-ಗೋಪಾಡಿಯ ಶ್ರೀ ರಾಮ ಭಜನಾ ಮಂದಿರದಲ್ಲಿ ಅಮೃತ ಮಹೋತ್ಸವ ನಡೆದಿತ್ತು. ಅಮೃತ ಮಹೋತ್ಸವ ನಿಮಿತ್ತ “ಶ್ರೀರಾಮ ತಾರಕಮಂತ್ರ ಕೋಟಿ ಲೇಖನ ಮಹಾಯಜ್ಞ” ನಡೆದಿತ್ತು. ಈ ಯಜ್ಞದ ವೇಳೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಸಂಕಲ್ಪ ಮಾಡಲಾಗಿತ್ತು. ಕಾಕತಾಳೀಯ ಎಂಬಂತೆ ಸರಿಯಾಗಿ ಒಂದು ವರ್ಷ ಕಳೆಯುತ್ತಿದ್ದಂತೆ, ಮತ್ತದೇ ದಿನ ಅಯೋಧ್ಯೆಯ ವಿಚಾರ ಸುಪ್ರೀಂನಲ್ಲಿ ಇತ್ಯರ್ಥಗೊಂಡಿದೆ.
ಸದ್ಯ ಗೋಪಾಡಿ-ಬೀಜಾಡಿ ಭಜನಾ ಮಂದಿರದಲ್ಲಿ ನಡೆದ ಶ್ರೀರಾಮ ತಾರಕಮಂತ್ರ ಕೋಟಿಲೇಖನ ಮಹಾಯಜ್ಞದ ವೇಳೆ, ಧಾರ್ಮಿಕ ವಿಧಾನ ನಡೆಸಿರುವ ವಿದ್ವಾಂಸರು ಹೇಳಿದ ಮಾತಿನ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ‘ಯಜ್ಞದಿಂದ ಬಂದ ಧೂಮ ಅಯೋಧ್ಯೆಯವರೆಗೆ ತಲುಪಿ ರಾಮಮಂದಿರ ನಿರ್ಮಾಣವಾಗಲಿ’ ಎಂದು ಅಲ್ಲಿ ವೈದಿಕರೊಬ್ಬರು ಮಾತನಾಡಿದ್ದಾರೆ.
ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣದ ಬಗ್ಗೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿರುವುದು ಉಲ್ಲೇಖನೀಯ ಹಾಗೂ ಸ್ಮರಣೀಯ ಎಂದು ಅಮೃತಮಹೋತ್ಸವ ಸಮಿತಿಯ ಪ್ರಮುಖರು ಹೇಳುತ್ತಿದ್ದಾರೆ.