ಉಡುಪಿ : ಸಿದ್ದರಾಮಯ್ಯ ಸರ್ಕಾರದಲ್ಲಿ ಕ್ರೀಡಾ ಸಚಿವರಾಗಿದ್ದ ಮೊಗವೀರ ಸಮುದಾಯದ ನಾಯಕ ಪ್ರಮೋದ್ ಮಧ್ವರಾಜ್ ವಿರುದ್ಧ, ಅವರದೇ ಸಮುದಾಯದ, ಅವರದೇ ಪಕ್ಷದ ಮಾಜಿ ಶಾಸಕ ಯು.ಆರ್. ಸಭಾಪತಿಯದ್ದು ಎನ್ನಲಾದ ಅವಾಚ್ಯ ರೀತಿಯಲ್ಲಿ ಮಾತನಾಡಿರುವ ಆಡಿಯೋ ಕರಾವಳಿಯಾದ್ಯಂತ ವೈರಲ್ ಆಗುತ್ತಿದೆ.
ಈ ಆಡಿಯೋ ತುಳು ಭಾಷೆಯಲ್ಲಿದೆ. ಪ್ರಸಾರಕ್ಕೆ ಯೋಗ್ಯವಲ್ಲದ ರೀತಿಯಲ್ಲಿ ಸಭಾಪತಿಯವರು ಪ್ರಮೋದ್ ಮಧ್ವರಾಜ್ ಅವರನ್ನು ನಿಂದಿಸಿ, ಬೈಗುಳಗಳ ಸುರಿಮಳೆಗೈದಿದ್ದಾರೆ. ಪ್ರಮೋದ್ ತಾಯಿ, ಮಾಜಿ ಸಂಸದೆ ಹಾಗೂ ಸಚಿವೆ ಮನೋರಮಾ ಅವರನ್ನೂ ತರಾಟೆಗೆ ತೆಗೆದುಕೊಂಡಿದ್ದಾರೆ.
ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಕಟ್ಟಿಬೆಳೆಸಿದವನು ನಾನು. ಅಂದು ನಾನು ಚುನಾವಣೆಗೆ ನಿಂತಾಗ ಇದೇ ಪ್ರಮೋದ್ ಮತ್ತು ಅವರ ತಾಯಿ ನನ್ನನ್ನು ಸೋಲಿಸಿದರು. ನಾನು ಕೇವಲ 1,200 ವೋಟ್ನಲ್ಲಿ ಸೋಲಬೇಕಾಯ್ತು. ಮೂರು ವರ್ಷ ಸಚಿವನಾಗಿದ್ದ ಪ್ರಮೋದ್, 12 ಸಾವಿರ ವೋಟ್ನಲ್ಲಿ ಸೋತಿದ್ದಾರೆ. ನಾಚಿಕೆ ಆಗಲ್ವಾ, ನನ್ನ ಕಾಲದಲ್ಲಿ ತಾಲೂಕು ಪಂಚಾಯತಿ, ನಗರಸಭೆ ಎಲ್ಲಾ ಕಡೆ ಕಾಂಗ್ರೆಸ್ ಆಡಳಿತವಿತ್ತು. ಪ್ರಮೋದ್ ಕಾಲದಲ್ಲಿ ಏನಾಯ್ತು? ನಗರಸಭೆಯ 36 ರಲ್ಲಿ 32 ಸೀಟ್ ಬಿಜೆಪಿಗೆ ಹೋಯ್ತು. ನಗರಸಭೆ, ಜಿಲ್ಲಾ ಪಂಚಾಯತಿ ಅಧಿಕಾರ ಹೋಯ್ತು. ಕಾಂಗ್ರೆಸ್ ಪಕ್ಷವನ್ನು ಸರ್ವನಾಶ ಮಾಡಿದ್ದೇ ಪ್ರಮೋದ್. ನಾವು ಹೋರಾಟ ಮಾಡಿ ಆಸ್ಕರ್ ಫರ್ನಾಂಡೀಸ್ರನ್ನು ಗೆಲ್ಲಿಸಿದ ಜನ. ಅದಕ್ಕಾಗಿ ಇಂದಿರಾ ಗಾಂಧಿವರೆಗೂ ಹೋಗಿದ್ದೆವು. ಅವಾಗೆಲ್ಲಾ ಈ ಪ್ರಮೋದ್, ಮನೋರಮಾ ಎಲ್ಲಿದ್ರು ಎಂದು ಹಳೇ ಫೈಲುಗಳನ್ನು ಓಪನ್ ಮಾಡಿ ಜಾಡಿಸಿದ್ದಾರೆ.
ರಾಜಕೀಯವೇನೇ ಇರಲಿ, ಮಾಜಿ ಸಚಿವರೊಬ್ಬರ ಬಗ್ಗೆ ಅವರದೇ ಪಕ್ಷದ ಮಾಜಿ ಜನಪ್ರತಿನಿಧಿಯೊಬ್ಬರ ಈ ಮಾತುಗಳು ಕಾಂಗ್ರೆಸ್ನ ನಿಜ ಕಾರ್ಯಕರ್ತರಲ್ಲಿ ಬೇಸರ ಹುಟ್ಟಿಸಿದೆ.