ಉಡುಪಿ: ಶಿರೂರು ಆ್ಯಂಬುಲೆನ್ಸ್ ದುರಂತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಆ್ಯಂಬುಲೆನ್ಸ್ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ. ಆ್ಯಂಬುಲೆನ್ಸ್ ಚಾಲಕ ರೋಶನ್‌ನನ್ನು ವಶಕ್ಕೆ ಪಡೆದ ಪೊಲೀಸರು ವೈದ್ಯಕೀಯ ಪರೀಕ್ಷೆಗೆ ಆತನ ರಕ್ತದ ಮಾದರಿಯನ್ನು ಮಣಿಪಾಲದ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.
ಚಾಲಕ ಮದ್ಯ ಸೇವನೆ ಮಾಡಿರುವ ಆರೋಪದ ಹಿನ್ನೆಲೆ ವೈದ್ಯಕೀಯ ಪರೀಕ್ಷೆ ನಡೆಯಲಿದೆ. ಇಂದು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಿದ್ದಾರೆ.
ಘಟನೆಯ ಹಿನ್ನೆಲೆ: ಹೊನ್ನಾವರದಿಂದ ಕುಂದಾಪುರಕ್ಕೆ ರೋಗಿಗಳನ್ನು ಕರೆದುಕೊಂಡು ಹೋಗುತ್ತಿದ್ದ ಆ್ಯಂಬುಲೆನ್ಸ್ವೊಂದು ಟೋಲ್ ಕಂಬಕ್ಕೆ ರಭಸವಾಗಿ ಡಿಕ್ಕಿ ಹೊಡೆದು, ಪಲ್ಟಿಯಾದ ಘಟನೆ ನಿನ್ನೆ (ಬುಧವಾರ) ಶಿರೂರು ಟೋಲ್ ಗೇಟ್ನಲ್ಲಿ ನಡೆದಿತ್ತು. ಪರಿಣಾಮ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದರು.
ಶಿರೂರು ಟೋಲ್ ಪ್ಲಾಝಾ ಬಳಿ ಬರುತ್ತಿದ್ದಂತೆಯೇ ಟೋಲ್ ಗೇಟ್ ಸಿಬ್ಬಂದಿಯನ್ನು ತಪ್ಪಿಸಲು ಹೋಗಿ ವಾಹನವು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಆ್ಯಂಬುಲೆನ್ಸ್ ಸಂಚಾರಕ್ಕೆ ನೆರವು ನೀಡಲು ಮುಂದಾಗಿದ್ದ ಟೋಲ್ ಸಿಬ್ಬಂದಿ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಭೀಕರ ಅಪಘಾತದ ದೃಶ್ಯ ಇಲ್ಲಿನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅಪಘಾತದ ತೀವ್ರತೆಗೆ ಆ್ಯಂಬುಲೆನ್ಸ್ ಜಖಂ ಆಗಿದೆ. ಘಟನಾ ಸ್ಥಳಕ್ಕೆ ಬೈಂದೂರು ಪೊಲೀಸರು ಭೇಟಿ ನೀಡಿದ್ದು, ಬೈಂದೂರು ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
ಓದಿ: ಶಿರೂರು ಟೋಲ್ ಕಂಬಕ್ಕೆ ಡಿಕ್ಕಿಯಾದ ಆ್ಯಂಬುಲೆನ್ಸ್; ನಾಲ್ವರು ದಾರುಣ ಸಾವು...ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ