ಉಡುಪಿ: ದೇಶದಲ್ಲಿ ನರೇಂದ್ರ ಮೋದಿ ಮತ್ತೆ ಪ್ರಧಾನಿ ಗದ್ದುಗೆ ಏರುವ ಖುಷಿಯಲ್ಲಿ ಮೋದಿಯವರ ಅಭಿಮಾನಿವೋರ್ವರು ಇಂದು ಬೆಳ್ಳಂಬೆಳಗ್ಗೆ ತಮ್ಮ ಹರಕೆಯನ್ನು ತೀರಿಸಿದ್ದಾರೆ.
ಉಡುಪಿ ಜಿಲ್ಲೆಯ ಕೋಟದಲ್ಲಿ ಲಕ್ಷ್ಮಣ ಕುಂದರ್ ಎಂಬುವರು ನರೇಂದ್ರ ಮೋದಿ ಮತ್ತೆ ಪ್ರಧಾನಿಯಾದ್ರೆ ಕೋಟ ರಾಜಶೇಖರ ದೇವಸ್ಥಾನದಲ್ಲಿ ಉರುಳು ಸೇವೆ ಹರಕೆ ಸಲ್ಲಿಸುವುದಾಗಿ ಬೇಡಿಕೊಂಡಿದ್ದರು. ಗುರುವಾರ ಹೊರಬಿದ್ದ ಫಲಿತಾಂಶದಲ್ಲಿ ಬಿಜೆಪಿ ಭಾರಿ ಬಹುಮತದೊಂದಿಗೆ ಜಯಗಳಿಸಿದೆ. ಈ ಹಿನ್ನೆಲೆಯಲ್ಲಿ ಮತ್ತೆ ನರೇಂದ್ರ ಮೋದಿ ಪ್ರಧಾನಿ ಪಟ್ಟಕ್ಕೇರಲಿರುವುದರಿಂದ ಅಭಿಮಾನಿ ಮೂರು ಬಾರಿ ಉರುಳು ಸೇವೆ ಸಲ್ಲಿಸಿ ಹರಕೆ ತೀರಿಸಿದ್ದಾರೆ. ಪ್ರತೀ ವರ್ಷ ಮೋದಿಯವರ ಹುಟ್ಟು ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುವ ಲಕ್ಷ್ಮಣ್ ಅವರು ಉಚಿತ ತಿಂಡಿ ತಿನಿಸುಗಳನ್ನು ತಮ್ಮ ಅಂಗಡಿ ಮೂಲಕವೇ ವಿತರಿಸುತ್ತಾ ಬಂದಿದ್ದಾರೆ.
ಕೋಟದಲ್ಲಿ ಚಿಕ್ಕ ಅಂಗಡಿಯೊಂದನ್ನು ನಡೆಸುತ್ತಿರುವ ಲಕ್ಷ್ಮಣ್ ತಮ್ಮ ಹರಕೆ ತೀರಿಸಿದ ಬಳಿಕ ಈಟಿವಿ ಭಾರತ ಜೊತೆ ಮಾತನಾಡಿ, ನಾನು ದೇಶ ಭಕ್ತ. ಅದಕ್ಕೆ ದೇಶವನ್ನು ಪ್ರೀತಿಸುವ ಮೋದಿ ಅಂದ್ರೆ ತುಂಬಾ ಇಷ್ಟ ಎಂದು ಬಿಜೆಪಿ ಗೆಲುವಿಗೆ ಸಂತಸ ವ್ಯಕ್ತಪಡಿಸಿದರು.